ನೀಟ್ ರದ್ದುಪಡಿಸುವಂತೆ ಆಗ್ರಹ

11rajesh2
Published on

ಚಾಮರಾಜನಗರ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ನಡೆಸಲಾಗುತ್ತಿರುವ ನೀಟ್ ರದ್ದುಗೊಳಿಸಿ ಆಯಾ ರಾಜ್ಯಗಳಿಗೆ ಈ ಪರೀಕ್ಷೆಗಳನ್ನು ನಡೆಸಲು ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕಚೇರಿಯಲ್ಲಿ ಉಪಕಾರ್ಯದರ್ಶಿ ಲಕ್ಷ್ಮೀ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಈ ಹಿಂದೆ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸುತ್ತಿದ್ದ ಪರೀಕ್ಷೆಗಳು ಆಯಾ ರಾಜ್ಯಗಳಿಗೆ ಸಂಬಂಧಪಟ್ಟಿರುತ್ತಿದ್ದವು. ಕಳೆದ ದಶಕಗಳಿಂದ ಕೇಂದ್ರ ಸರ್ಕಾರವು ನೀಟ್ ಎಂಬ ಹೆಸರಿನಲ್ಲಿ ವೈದ್ಯಕೀಯ ಶಿಕ್ಷಣ ಪರೀಕ್ಷೆಗಳನ್ನು ದೇಶಾದ್ಯಂತ ನಡೆಸುತ್ತಿದೆ. ಆದರೆ ಈ ಸಾಲಿನ ನೀಟ್‌ನಲ್ಲಿ ತಾಂತ್ರಿಕ ದೋಷವಾಗಿ ಲಕ್ಷಾಂತರ ಅರ್ಹ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಈಗಾಗಲೇ ರಾಜ್ಯದಲ್ಲಿ ನೀಟ್ ಬರೆದಿರುವ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಾರಿಯ ನೀಟ್‌ನಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿರುವ ಶಂಕೆ ಇದೆ. ಇದರಿಂದಾಗಿ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಲಿದೆ. ಈಗಾಗಲೇ ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ರಾಷ್ಟ್ರಮಟ್ಟದ ನೀಟ್ ರದ್ದುಗೊಳಿಸಿ, ಪರೀಕ್ಷೆಗಳನ್ನು ನಡೆಸಲು ಆಯಾ ರಾಜ್ಯಗಳಿಗೆ ಅಧಿಕಾರ ನೀಡಬೇಕು. ಇದಕ್ಕೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ, ನಿಜಧ್ವನಿ ಗೋವಿಂದರಾಜು, ಪಣ್ಯದಹುಂಡಿ ರಾಜು, ಮಹೇಶ್ ಗೌಡ, ಗು.ಪುರುಷೋತ್ತಮ, ಚಾ.ರಾ.ಕುಮಾರ್, ನಂಜುಂಡಶೆಟ್ಟಿ, ರಾಜಪ್ಪ, ಲಿಂಗರಾಜು, ಚಾ.ಸಿ.ಸಿದ್ದರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net