ಗ್ರಾಪಂ ಸಭೆ ರದ್ದು

Published on

ಯಳಂದೂರು: ತಾಲೂಕಿನ ಯರಿಯೂರು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಕರೆಯಲಾಗಿದ್ದ ನರೇಗಾ ಸಾಮಾಜಿಕ ಲೆಕ್ಕ ತಪಾಸಣೆ ಸಭೆಗೆ ಚುನಾಯಿತ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಮಾಹಿತಿಯೇ ನೀಡದ ಕಾರಣ, ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಭೆ ರದ್ದಾಗಿದೆ.

ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಉಪ್ಪಾರ ಸಮುದಾಯ ಭವನದ ಆವರಣದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಇದು ಗ್ರಾಮದ ಹೊರವಲಯದಲ್ಲಿದ್ದು ಸಾರ್ವಜನಿಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಇಷ್ಟು ದಿನ ಗ್ರಾಮದ ಮಧ್ಯ ಭಾಗದಲ್ಲಿರುವ ವೀರಭದ್ರೇಶ್ವರ ದೇಗುಲದ ಆವರಣದಲ್ಲಿ ಸಭೆ ನಡೆಸಲಾಗುತ್ತಿತ್ತು. ಆದರೆ ದಿಢೀರ್ ಸ್ಥಳ ಬದಲಾವಣೆ ಮಾಡಲಾಗಿದೆ. ಈ ಸ್ಥಳದಲ್ಲಿ ದೊಡ್ಡ ಅರಳಿಮರವಿದ್ದು, ಈ ಹಿಂದೆ ಇದರ ಕೊಂಬೆ ಮುರಿದು ಇಬ್ಬರು ಮೃತಪಟ್ಟಿದ್ದರು. ಇದೇ ಸ್ಥಳದಲ್ಲಿ ಸಭೆ ಮಾಡಲು ಶಾಮಿಯಾನ ಹಾಕಲಾಗಿದ್ದು ಇದು ಅಪಾಯಕಾರಿ ಸ್ಥಳವಾಗಿದೆ.

ಗ್ರಾಮ ಪಂಚಾಯಿತಿ ಕೆಲ ಸದಸ್ಯರಿಗೆ ಈ ಬಗ್ಗೆ ಮಾಹಿತಿಯೇ ನೀಡಿಲ್ಲ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಯರಿಯೂರು, ಗಣಿಗನೂರು ಮತ್ತು ಚಾಮಲಾಪುರದ ಗ್ರಾಮಸ್ಥರಿಗೆ ಮಾಹಿತಿಯೇ ಇಲ್ಲ. ಈ ಹಿಂದೆ ಡಂಗೂರ ಹಾಕಿಸುವ ಮೂಲಕ ಸಭೆ ನಡೆಯುವ ದಿನ, ಸಮಯ, ಸ್ಥಳದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಈಗ ಇದರ ಬಗ್ಗೆ ಮಾಹಿತಿಯೇ ಇಲ್ಲ. ಸಾರ್ವಜನಿಕರು ಇದರಲ್ಲಿ ಭಾಗಿಯಾಗಿದ್ದರೆ ಈ ಸಭೆಗೆ ಅರ್ಥವೇ ಇರುವುದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿದ್ದು ಇದನ್ನು ಚರ್ಚಿಸಬೇಕು, ಇದಕ್ಕೆ ಪರಿಹಾರವನ್ನು ಇಂತಹ ಸಭೆಗಳಲ್ಲಿ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಭೆ ನಡೆಸಬೇಕಿದೆ. ಆದರೆ ಇಲ್ಲಿ ಜನರೇ ಇಲ್ಲ, ಇಂತಹದರಲ್ಲಿ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳುವುದು ಸೂಕ್ತವಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸಭೆ ಮುಂದೂಡಲಾಗಿದೆ.

ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ, ಉಪಾಧ್ಯಕ್ಷ ಮಹೇಶ್ ಸದಸ್ಯರಾದ ಚಿನ್ನಸ್ವಾಮಿ, ರಾಜೇಶ್, ಶೈಲಜಾ, ನಾರಾಯಣಸ್ವಾಮಿ, ಕಪ್ಪಣ್ಣ ನರೇಗಾ ತಾಲೂಕು ಸಂಯೋಜಕ ನಾರಾಯಣ, ಪಿಡಿಒ ರಮೇಶ್, ನೋಡಲ್ ಅಧಿಕಾರಿ ರಾಜು, ಸಭೆಯ ನೋಡಲ್ ಅಧಿಕಾರಿ ಕೆ.ಎಂ. ಮಧು, ಜೆಇ ಅನುಶ್ರೀ, ಸತ್ಯಪಾಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net