ಅಭಿವೃದ್ಧಿ ಮಾಡಲು ಉಸ್ತುವಾರಿಯೇ ಆಗಬೇಕಿಲ್ಲ

Published on

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಾಗಿಯೇ ಬರಬೇಕಾಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆ ಸಚಿವನಾಗಿದ್ದಾಗ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಎಂಬುದು ಸಾಂವಿಧಾನಿಕ ಹುದ್ದೆ ಏನಲ್ಲಾ, ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಆ ಸ್ಥಾನ ಅಗತ್ಯವಾಗಿರುತ್ತದೆ. ಈಗ ಸಚಿವನಾಗಿಯೂ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದರು.

ಇಂಡಿಗನತ್ತಾ ಪ್ರಕರಣದಲ್ಲಿ ಈಗಾಗಲೇ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವ ಮಾತೇ ಇಲ್ಲ. ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ. ಆತ್ಮಹತ್ಯೆಗೆ ಯತ್ನಿಸಿದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಬರುವ ಪರಿಹಾರವನ್ನು ನೀಡುತ್ತೇವೆ. ಯಾವುದೇ ಪ್ರಕರಣವಾದರೂ ಅದರ ಸತ್ಯಾಸತ್ಯತೆಗಳನ್ನು ತಿಳಿಯದೇ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಸಂಸದ ಸುನೀಲ್ ಬೋಸ್ ಜನರ ಕೈಗೆ ಸಿಗುವುದಿಲ್ಲ ಎಂಬುದು ವಿರೋಧಿಗಳು ಹರಡುವ ಅಪಪ್ರಚಾರವಾಗಿದೆ. ಈಗ ಅವರು ದೆಹಲಿಗೆ ಹೋಗಿದ್ದಾರೆ, ಸಂಸದರ ಪ್ರಮಾನ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಇದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಿಗಲೇ ಬೇಕಿರುತ್ತದೆ. ಕ್ಷೇತ್ರದ ಕೆಲಸ ಮಾಡಬೇಕಾಗುತ್ತದೆ, ಮಾಡುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net