ಗ್ಯಾರೆಂಟಿ ಯೋಜನೆ ನಿಲ್ಲಿಸುವ ಮಾತಿಲ್ಲ

Published on

ಚಾಮರಾಜನಗರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರೆಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಪಶುಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸ್ಪಷ್ಟಪಡಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗ್ಯಾರೆಂಟಿ ವರ್ಕೌಟ್ ಆಗಿಲ್ಲ ಎಂದು ಹೇಳಲು ಆಗುವುದಿಲ್ಲ. ಗ್ಯಾರೆಂಟಿ ಯೋಜನೆಗಳ ಕುರಿತು ಕೆಲವರು ಅವರ ಅಭಿಪ್ರಾಯಗಳನ್ನು ಹೇಳುತ್ತಾರೆ. ಆದರೆ ಈ ಯೋಜನೆಗಳನ್ನು ಬಡವರಿಗಾಗಿ ಮಾಡಿದ್ದು, ಈಗಾಗಲೇ ಮುಖ್ಯಮಂತ್ರಿಗಳು ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಜನಪರ ಯೋಜನೆಗಳನ್ನು ನಿಲ್ಲಿಸುವ ಮಾತಿಲ್ಲ ಎಂದರು.

ಜಿಲ್ಲೆಯ ಉಸ್ತುವಾರಿ ಬದಲಾವಣೆಯ ಬಗ್ಗೆ ನಾವು ಯಾರಲ್ಲೂ ಕೇಳಿಲ್ಲ. ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಭೆಗೆ ಆಗಮಿಸಿರುವುದು ಕೆ.ಆರ್.ನಗರ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಾಹಿತಿ ಪಡೆಯಲು. ಅವರನ್ನು ನಾನು ಇಲ್ಲಿಗೆ ಬನ್ನಿ ಎಂದು ಕರೆದಿದ್ದರಿಂದ ಬಂದಿದ್ದಾರೆ. ಉಸ್ತುವಾರಿ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net