

ಚಾಮರಾಜನಗರ: ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಭಾನುವಾರ ಸಂಭ್ರಮ ವ್ಯಕ್ತಪಡಿಸಿದರು.
ನಗರದ ಸಂತೇಮರಹಳ್ಳಿ ವೃತ್ತದಲ್ಲಿ ನರೇಂದ್ರಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಮೋದಿ ಭಾವಚಿತ್ರಕ್ಕೆ ಪುಷ್ಪ ವೃಷ್ಠಿ ಮಾಡಿದರು. ಅಲ್ಲದೇ ಯುವಕರು ಬಿಜೆಪಿ ಬಾವುಟ ಹಿಡಿದು ಬೈಕ್ ರ‌್ಯಾಲಿಯನ್ನು ಸಹ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಟರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಎನ್‌ಡಿಎ ಮೈತ್ರಿಕೂಟದಿಂದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ. ಎರಡು ಅವಧಿಯಲ್ಲಿ ಅವರು ಮಾಡಿರುವ ಸಾಧನೆಯನ್ನು ನೋಡಿ, ದೇಶದ ಜನರು ಮತ್ತೊಮ್ಮೆ ಅವರು ಪ್ರಧಾನಿಯಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಇಂದು ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದರು.
ಅದಲ್ಲದೇ ನಮ್ಮ ನಾಯಕರಾದ ವಿ.ಸೋಮಣ್ಣ ಅವರು ಸಹ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಹೆಚ್ಚಿನ ಸಂತೋಷ ತಂದಿದೆ. ತುಮಕೂರು ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆ ಅವರಿಗೆ ರಾಷ್ಟ್ರೀಯ ವರಿಷ್ಠರು ಸಚಿವರನ್ನಾಗಿ ಮಾಡಿರುವುದು ಅವರ ಸಂಘಟನೆಯ ಚತುರತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ನಗರ ಮಂಡಲದ ಅಧ್ಯಕ್ಷ ಶಿವರಾಜು, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಡಾ. ಬಾಬು, ಎಸ್. ಬಾಲಸುಬ್ರಮಣ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್‌ಪಟೇಲ್, ವಿಜಯೇಂದ್ರ, ಎ ಸೂರ್ಯಬಾಲರಾಜು, ವಿರಾಟ್ ಶಿವು, ಆರ್. ಸುಂದರ್, ಕೂಸಣ್ಣ, ಜಯಸುಂದರ್,ಮಾರ್ಕೇಟ್ ಕುಮಾರ್, ಉತ್ತುವಳ್ಳಿ ಮಹೇಶ್, ಪರಶಿವ, ಕೇಬಲ್ ರಂಗಸ್ವಾಮಿ ಮಂಜುನಾಥ್ ಹಾಗೂ ಇತರರು ಹಾಜರಿದ್ದರು.