

ಚಾಮರಾಜನಗರ : ಚಿತ್ರನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕರ ನಡುವಿನ ಸಮರ ಅಭಿಮಾನಿಗಳ ಹಂತಕ್ಕೆ ತಲುಪಿದ್ದು, ಆಲ್ ಇಂಡಿಯಾ ಬಾದ್‌ಶಾ ಕಿಚ್ಚ ಸುದೀಪ್ ್ಯಾನ್ಸ್ ಅಸೋಸಿಯೇಷನ್ ಸದಸ್ಯರು ಮಂಗಳವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರರು, ಇಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು, ನಿರ್ಮಾಪಕ ಎನ್.ಕುಮಾರ್ ಮತ್ತು ತಂಡದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ನಾಗೇಂದ್ರನಾಯಕ್ ಮಾತನಾಡಿ, ಕೆಲವು ದಿನಗಳಿಂದ ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಮೇಲೆ ನಿರ್ಮಾಪಕ ಎನ್.ಕುಮಾರ್ ಮತ್ತು ಸ್ನೇಹಿತರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಟ ಸುದೀಪ್ ಏಳಿಗೆಯನ್ನು ಸಹಿಸಿಕೊಳ್ಳಲಾಗದೆ, ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿದ್ದಾರೆ. ಇದರ ವಿರುದ್ಧ ರಾಜ್ಯಾದ್ಯಂತ ಕಿಚ್ಚ ಸುದೀಪ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದೇವೆ. ನಿರ್ಮಾಪಕರು ಇದನ್ನು ಮುಂದುವರಿಸಿಕೊಂಡು ಹೋದರೆ, ರಾಜ್ಯದ ಕೋಟ್ಯಂತರ ಅಭಿಮಾನಿಗಳು ಸುದೀಪ್ ಜತೆಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಕಿಚ್ಚ ಸುದೀಪ್ ವಿರುದ್ಧ ಯಾರೇ ಪಿತೂರಿ ಮಾಡಿದ್ದರೂ ಅದರಿಂದ ಸುದೀಪ್ ಅವರಿಗೆ ಯಾವುದೇ ನಷ್ಟವಾಗುವುದಿಲ್ಲ. ಬದಲಾಗಿ ಈಗ ಸುದೀಪ್ ವಿರುದ್ಧ ಆರೋಪ ಮಾಡುತ್ತಿರುವ ನಿರ್ಮಾಪಕರ ಚಲನಚಿತ್ರಗಳನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಕೂಡಲೇ ಈ ಆರೋಪಗಳನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ನಿರ್ಮಾಪಕರ ಮನೆಯ ಮುಂಭಾಗ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಬಾದ್‌ಶಾ ಕಿಚ್ಚ ಸುದೀಪ್ ್ಯಾನ್ಸ್ ಅಸೋಸಿಯೇಷನ್ ಸಂಘಟನೆಯ ಉಪಾಧ್ಯಕ್ಷ ಆನಂದ್, ಪ್ರಧಾನ ಕಾರ್ಯದರ್ಶಿ ರಾಮು, ಬಸವರಾಜು, ರಂಗನಾಯ್ಕ, ರಂಗಸ್ವಾಮಿ, ಚೇತನ್, ಹರೀಶ್, ನಾಗೇಶ್ ಇತರರು ಭಾಗವಹಿಸಿದ್ದರು.