ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ಬಹುಮುಖ್ಯ

11rajesh6
Published on

ಚಾಮರಾಜನಗರ: ವಿದ್ಯಾರ್ಥಿಗಳು ಜ್ಞಾನದ ಜತೆಗೆ ಜೀವನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಸಲಹೆ ನೀಡಿದರು.

ತಾಲೂಕಿನ ರಂಗಸಂದ್ರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಯುವ ಸ್ಪಂದನ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯದ ಕುರಿತು ತರಬೇತಿ ಹಾಗೂ ಯುವ ಸ್ಪಂದನ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ತಮ್ಮನ್ನು ತಾವು ಆಳವಾಗಿ ಕಂಡುಕೊಳ್ಳಲು ಮತ್ತು ಹೊರ ಜಗತ್ತಿಗೆ ಮುಕ್ತವಾಗಿ ತೆರೆದುಕೊಳ್ಳಲು, ತಮ್ಮ ಬದುಕನ್ನು ರಚನಾತ್ಮಕವಾಗಿ ಕಟ್ಟಿಕೊಳ್ಳಲು, ಸಮಾಜದ ಒಳಿತಿಗಾಗಿ ತೊಡಗಿಸಿಕೊಳ್ಳಲು ಜೀವನ ಕೌಶಲ್ಯ ಅಗತ್ಯವಿದೆ. ತಮ್ಮ ವೈಯಕ್ತಿಕ ಬೆಳವಣಿಗೆಗೆ, ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಜೀವನ ಕೌಶಲ್ಯಗಳು ತುಂಬಾ ಸಹಕಾರಿಯಾಗಲಿವೆ ಎಂದರು.

ನಿಮ್ಮ ಸೋಲುಗಳಿಗೆ ಯಾರನ್ನೂ ದೂಷಿಸದೇ ನಿಮ್ಮನ್ನು ನೀವು ಸರಿಪಡಿಸಿಕೊಳ್ಳುತ್ತಾ ಬದುಕಿಗೆ ದಾರಿದೀಪಗಳಾಗಬೇಕು. ಅಧ್ಯಯನಶೀಲತೆ, ಪುಸ್ತಕ ಪ್ರೇಮ, ಸ್ವತಂತ್ರ ಚಿಂತನೆ, ದೂರದೃಷ್ಠಿ ಹಾಗೂ ದೊಡ್ಡ ಕನಸಿನಿಂದ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಯುವ ಪರಿವರ್ತಕ ಎಸ್.ಗುರುರಾಜು ಮಾತನಾಡಿ, ಸರ್ಕಾರವು ಯುವಸ್ಪಂದನ ಎನ್ನುವ ಘಟಕವನ್ನು ಪ್ರಾರಂಭಿಸಿ, ಸಮಾಜದ ಜನರಿಗೆ ಎಲ್ಲಾ ರೀತಿಯಲ್ಲೂ ಉಪಯೋಗವಾಗುವಂತೆ ಕೆಲಸ ಮಾಡುತ್ತಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ ಮತ್ತು ಜೀವನ ಶೈಲಿ, ಸಂಬಂಧಗಳು, ಸುರಕ್ಷತೆ, ಲಿಂಗ ಮತ್ತು ಲೈಂಗಿಕತೆ, ವ್ಯಕ್ತಿತ್ವ ಬೆಳವಣಿಗೆ, ಭಾವನೆಗಳು, ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಯುವ ಸ್ಪಂದನ ಕಾರ್ಯಕ್ರಮದಲ್ಲಿ ಉಚಿತವಾಗಿ ಮಾರ್ಗದರ್ಶನ ನೀಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಸತಿ ಶಾಲೆಯ ಪ್ರಾಂಶುಪಾಲ ವಿಲಾಸ್ ಜೋಗೆನ್ನವರ, ನಿಲಯ ಪಾಲಕ ಶಂಕರ್, ಸಿಬ್ಬಂದಿಗಳಾದ ಕಾಂತ, ಜಯಶ್ರೀ, ರೂಪ, ರೇಖಾ, ವಿದ್ಯಾಶ್ರೀ, ಧನಲಕ್ಷ್ಮಿ, ಸಿ.ಶ್ವೇತಾ, ಗೀತಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net