

ಚಾಮರಾಜನಗರ: ಕಳೆದ ಶೈಕ್ಷಣಿಕ ವರ್ಷದಲ್ಲಿ ಸೇವೆ ಸಲ್ಲಿಸಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರನ್ನು ಈ ಶೂಕ್ಷಣಿಕ ವರ್ಷವೂ ಸೇವೆಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕಚೇರಿಗೆ ಸಂಘಟನೆಯ ಪದಾಧಿಕಾರಿಗಳು ಭೇಟಿ ನೀಡಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ ಅವರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿ ಕೆ.ಎಸ್.ರಾಜೇಂದ್ರ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷ ರಾಜ್ಯದಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ನೀಡಿ, ಪದವಿ ಪೂರ್ವ ಇಲಾಖೆಯ ಬೆನ್ನೆಲುಬಾಗಿ ನಿಂತು, ಒಳ್ಳೆಯ ಫಲಿತಾಂಶಗಳನ್ನು ನೀಡಿದ್ದೇವೆ. ಇದೀಗ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ (2024-2025) ಕಳೆದ ಶೈಕ್ಷಣಿಕ ವರ್ಷ ಸೇವೆ ಸಲ್ಲಿಸಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದುವರಿಸುವುದು ನ್ಯಾಯಯುತವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮೆರಿಟ್‌ನೊಂದಿಗೆ ಸೇವಾ ಅನುಭವ ಹೆಚ್ಚಿರುವ ಅತಿಥಿ ಉಪನ್ಯಾಸಕರ ಪಾತ್ರ ಮಹತ್ವದಾಗಿರುತ್ತದೆ.
ಹಾಗಾಗಿ, ಮೊದಲು ಸೇವಾ ಅನುಭವ ಹೆಚ್ಚಿರುವ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸರ್ಕಾರ ಹಾಗೂ ಪದವಿ ಪೂರ್ವ ಇಲಾಖೆ ಕೈಗೊಳ್ಳಬೇಕಿದೆ ಎಂದರು. ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು ಕನಿಷ್ಠ 20,000 ರೂ. ಗೆ ಏರಿಸಬೇಕು. ಪದವಿ ಪೂರ್ವ ಇಲಾಖೆಯ ಸುತ್ತೋಲೆಯಂತೆ ಅತಿಥಿ ಉಪನ್ಯಾಸಕರು ವಾರಕ್ಕೆ ಕೇವಲ 10 ಗಂಟೆಗಳು ಕಾರ್ಯಭಾರ ನೀಡುವಂತೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಅತಿಥಿ ಉಪನ್ಯಾಸಕರಾದ ಶಿವಪ್ರಸಾದ್, ಜಿ.ಶಿವು, ಪುಟ್ಟೇಶ್, ಉಮೇಶ್, ಚೇತನ್, ಸಂತೋಷ್ ಕುಮಾರ್, ಮಹೇಶ್, ಮಹದೇವಸ್ವಾಮಿ, ಪ್ರತಾಪ್, ಪ್ರಿಯಾಂಕ, ಶೃತಿ, ಸುನಂದಾ ಹಾಗೂ ಇತರರು ಹಾಜರಿದ್ದರು.