ಗುಣಮಟ್ಟದ ಹಾಲು ಒದಗಿಸಲು ಸಾಲಸೌಲಭ್ಯ

11rajesh3
Published on

ಚಾಮರಾಜನಗರ: ಹಾಲು ಉತ್ಪಾದಕರ ಸಹಕಾರ ಸಂಘದ ಬೆಳವಣಿಗೆ ಹಾಗೂ ರೈತರು ಗುಣಮಟ್ಟದ ಹಾಲನ್ನು ಒದಗಿಸುವ ಸಲುವಾಗಿ ಸಾಲಸೌಲಭ್ಯ ಕಲ್ಪಿಸಲಾಗುವುದು ಎಂದು ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್ ಭರವಸೆ ನೀಡಿದರು.

ತಾಲೂಕಿನ ಕುದೇರು ಗ್ರಾಮದಲ್ಲಿರುವ ಹಾಲು ಉತ್ಪಾದಕರ ಸಂಘದ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾಸಿಕ ಸಭೆ ಹಾಗೂ ನಿವೃತ್ತ ಸಂಘದ ಕಾರ್ಯದರ್ಶಿ ಶಿವನಾಗಪ್ಪ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಸಂಘದಲ್ಲಿ 550-600 ಲೀ. ಹಾಲು ಶೇಖರಣೆ ಆಗುತ್ತಿದೆ. ಹಿಂದಿನಿಂದಲೂ ಸಂಘವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದೀರಿ. ಮುಂದಿನದಿನಗಳಲ್ಲೂ ಸಂಘ ಅತ್ಯುತ್ತಮವಾಗಿ ನಡೆದುಕೊಂಡು ಹೋಗಲು ಹಾಗೂ ಅದರ ಬೆಳವಣಿಗೆಗೆ ಅನುಕೂಲವಾಗುವಂತೆ ರೈತರಿಗೆ ಬ್ಯಾಂಕ್ ವತಿಯಿಂದ ಸಾಕಸೌಲಭ್ಯಗಳನ್ನು ಕಲ್ಪಿಸಕೊಡಲಾಗುವುದು. ರೈತರು ಇದರ ಸದುಪಯೋಗವನ್ನು ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಕೆ.ಎನ್.ಣಿರಾಜಮೂರ್ತಿ ಮಾತನಾಡಿ, ಸತತ 39 ವರ್ಷಗಳಿಂದ ದೇಮಹಳ್ಳಿ ಗ್ರಾಮದ ಹಾಲುಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತ ಹೊಂದಿದ ಶಿವನಾಗಪ್ಪ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಕುದೇರು ಹಾಲು ಉತ್ಪಾದಕರ ಸಹಕಾರ ಸಂಘದ ಉಳಿವಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶೇಷಣ್ಣ , ಮಾಜಿ ಅಧ್ಯಕ್ಷರಾದ ಕೆ.ಎನ್.ಸಿದ್ದೇಶ್, ನಿರ್ದೇಶಕರಾದ ಬಂಗಾರಗಿರಿ, ಮಹಾದೇವಯ್ಯ, ಕೆ.ಪಿ.ಉಮೇಶ್, ನಾಗೇಗೌಡ, ನಟರಾಜು, ಗೋವಿಂದಶೆಟ್ಟಿ, ಜಯಮ್ಮ, ಚಾಮಮ್ಮ, ಹಾಲು ಉತ್ಪಾದಕ ಬಸವಣ್ಣ, ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ಹಾಲು ಪರೀಕ್ಷಕ ಮಲ್ಲು ಹಾಗೂ ಕುದೇರು, ತೆಂಕಲಮೋಳೆ, ಬಡಗಲಮೋಳೆ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net