

ಹನೂರು: ಕೊಳ್ಳೇಗಾಲದಿಂದ ಕಣ್ಣೂರು ಮಾರ್ಗವಾಗಿ ತಾಲೂಕಿನ ಬೈಲೂರಿಗೆ ಸಂಚರಿಸುವ ಸಾರಿಗೆ ಬಸ್ ಸರಿಯಾಗಿ ಬಾರದ ಕಾರಣ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತುಂಬಾ ತೊಂದರೆ ಪಡುವಂತಾಗಿದೆ.
ಈ ಮಾರ್ಗದಲ್ಲಿ ಚನ್ನಾಲಿಂಗನಹಳ್ಳಿ, ಲೊಕ್ಕನಹಳ್ಳಿ, ಒಡೆಯರಪಾಳ್ಯ, ಹುತ್ತೂರು, ಹುಣಸೇಪಾಳ್ಯ ಗ್ರಾಮದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗಳಿಗೆ ತೆರಳುತ್ತಾರೆ. ಬೆಳಗ್ಗೆ 8.15 ಕ್ಕೆ ಕೊಳ್ಳೇಗಾಲದಿಂದ ಹೊರಡುವ ಸಾರಿಗೆ ಬಸ್ 10 ಗಂಟೆಗೆ ಬೈಲೂರಿಗೆ ತಲುಪುತ್ತದೆ. ಇದರಿಂದ ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲವಾಗಿದೆ. ಆದರೆ ಶಾಲೆ ಆರಂಭವಾಗಿ 10 ದಿನ ಕಳೆದರೂ ಬಸ್ ನಿಗದಿತ ವೇಳೆಗೆ ಬರುತ್ತಿಲ್ಲ. ಅಲ್ಲದೆ ಕೆಲ ದಿನಗಳಲ್ಲಿ ಬಸ್ ಬರುವುದೇ ಇಲ್ಲ. ಹಾಗಾಗಿ ಈ ಬಸ್ ನಂಬಿ ಕಾದು ಕುಳಿತ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡೇ ತೆರಳಬೇಕಿದೆ.
ಬಸ್ ಸಮಸ್ಯೆಯಿಂದ ನಿಗದಿತ ವೇಳೆಗೆ ಶಾಲೆಗೆ ತಲುಪಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಶಾಲೆಗೆ ತೆರಳಲು ಪರದಾಡುವಂತಾಗಿದೆ. ಈ ಬಗ್ಗೆ ಕೊಳ್ಳೇಗಾಲ ಘಟಕದ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿರ್ವಾಹಕ ಹಾಗೂ ಚಾಲಕರನ್ನು ವಿಚಾರಿಸಿದರೆ ರಿಪೇರಿ ಹಾಗೂ ಪಂಕ್ಚರ್ ಆಗಿತ್ತು ಎಂದು ಹೇಳುತ್ತಾರೆ. ಇದರಿಂದ ನಿತ್ಯ ಬಸ್ಸಿಗಾಗಿ ಕಾಯುವುದೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ತೊಂದರೆ ಅನುಭವಿಸುವಂತಾಗಿದೆ ಎಂದು ಶಿಕ್ಷಕರು ದೂರಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿಗದಿತ ವೇಳೆಗೆ ಬಸ್ ಸಂಚರಿಸುವಂತೆ ಒತ್ತಾಯಿಸಿದ್ದಾರೆ.
ಬೆಳಗ್ಗೆ ಶಾಲಾ ಅವಧಿಯ ವೇಳೆಗೆ ಈ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್ ನಿಗದಿತ ವೇಳೆಗೆ ಆಗಮಿಸುತ್ತಿಲ್ಲ. ಕೆಲ ದಿನಗಳಲ್ಲಿ ಬಸ್ ಬರುವುದೇ ಇಲ್ಲ. ಇದರಿಂದ ಈ ಮಾರ್ಗದಲ್ಲಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಗೆ ತೆರಳಲು ತುಂಬಾ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.ವೆಂಕಟೇಶ್, ಶಿಕ್ಷಕ
ಶಾಲೆ ಆರಂಭವಾದಾಗಿನಿಂದ ಬಸ್ ನಿಗದಿತ ವೇಳೆಗೆ ಸಂಚರಿಸುತ್ತಿದೆ. ಆದರೆ ಕೆಲ ದಿನ ಪಂಕ್ಚರ್ ಆದ ಕಾರಣ ಸಮಸ್ಯೆಯಾಗಿರಬಹುದಷ್ಟೆ. ಈ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ನಿಗದಿತ ವೇಳೆಗೆ ಬಸ್ ಸಂಚರಿಸುವಂತೆ ಕ್ರಮವಹಿಸಲಾಗುವುದು.ವೆಂಕಟರಮಣಸ್ವಾಮಿ, ಡಿಪೋ ವ್ಯವಸ್ಥಾಪಕ, ಕೊಳ್ಳೇಗಾಲ