ಮೊಸಳೆ ಕಾಣಿಸಿಕೊಂಡ ಸತ್ತೇಗಾಲದಲ್ಲಿ ಮನೆ ಮಾಡಿದ ಆತಂಕ

9-kglphoto-8,
Published on

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಯಡಕುರಿಯ ಗ್ರಾಮದ ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬ ಮೊಸಳೆ ದಾಳಿಗೆ ಒಳಗಾದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಆತಂತ ಎದುರಾಗಿದ್ದು. ಮೊಸಳೆ ಸೆರೆಗೆ ಅರಣ್ಯ ಇಲಾಖೆ ಕ್ರಮವಹಿಸಬೇಕೆಂದು ಒತ್ತಾಯಿಸಿದ್ದಾರೆ.

ಮೊದಲು ಪಾರಿವಾಳ, ನಂತರ ಮೇಕೆ ಮರಿ ಮೇಲೆ ದಾಳಿ ನಡೆಸಿದ್ದ ಮೊಸಳೆ ಶನಿವಾರ ಬೆಳಗ್ಗೆ ಸತ್ತೇಗಾಲ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಕಾವೇರಿ ನದಿಯಲ್ಲಿ ನೀರು ತೆಗೆದುಕೊಳ್ಳಲು ತೆರಳಿದ್ದಾಗ ದಾಳಿ ನಡೆಸಿದೆ. ಗಾಯಾಳು ಬಲಗೈ ಮುರಿದಿದ್ದು ಮೈಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮಸ್ಥರು ನದಿಯ ಬಳಿ ತೆರಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಭಾನುವಾರವೂ ನಂಜುಂಡಸ್ವಾಮಿ ದಾಳಿಗೊಳಗಾದ ಸ್ಥಳದಲ್ಲಿಯೇ ಮೊಸಳೆ ಕಾಣಿಸಿಕೊಂಡಿದೆ. ಗ್ರಾಮಸ್ಥರು ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲೆ ನಿಂತು ಮೊಸಳೆ ಚಲನವಲನವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಮೊಸಳೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತ ಆಗಬಹುದೆಂದು ಜನರು ಗಾಬರಿಗೊಂಡಿದ್ದಾರೆ. ಪಾರಿವಾಳ, ನಂತರ, ಮೇಕೆಮರಿ ಮೇಲೆ ದಾಳಿ ಮಾಡಿದಾಗಲೇ ಅರಣ್ಯ ಇಲಾಖೆ ಎಚ್ಚೆತ್ತು ಕ್ರಮ ವಹಿಸಿದ್ದಾರೆ. ಮೊಸಳೆ ಮನುಷ್ಯನ ಮೇಲೆ ಎರಗುವುದು ತಪ್ಪುತ್ತಿತ್ತು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ನೀರಿಲ್ಲಿರುವ ಮೊಸಳೆಯನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಗ್ರಾಮಸ್ಥರು ಮೊಸಳೆಯ ಆತಂಕದಲ್ಲಿಯೇ ಜೀವಿಸಬೇಕೆ ಎಂಬುದು ಜನರ ಪ್ರಶ್ನೆಯಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಮೊಸಳೆಯನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರ ಮಾಡಬೇಕು. ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂಬುದು ಜನರ ಒತ್ತಾಯವಾಗಿದೆ.

ನದಿಗೆ ಇಳಿಯದಂತೆ ಗ್ರಾಪಂ ಪ್ರಚಾರ:
ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿರುವ ಬಳಿಕ ಸತ್ತೇಗಾಲ ಗ್ರಾಪಂ ಕಡೆಯಿಂದ ಯಡಕುರಿಯ ಗ್ರಾಮದ ನದಿಯಲ್ಲಿ ಮೊಸಳೆ ಇರುವುದರಿಂದ ಬಟ್ಟೆ ತೊಳೆಯಲು, ದನ, ಕರು ಶುಚಿಗೊಳಿಸಲು, ಸ್ನಾನ ಮಾಡಲು ನದಿಗೆ ಇಳಿಯದಂತೆ ಭಾನುವಾರ ಆಟೋ ಮೂಲಕ ಪ್ರಚಾರ ಮಾಡಿ ಜಾಗೃತಿ ಮೂಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net