ಕೊಳ್ಳೇಗಾಲ: ಕೊಳ್ಳೇಗಾಲ ಒಳಚರಂಡಿ ಮಂಡಳಿ ನಗರ ಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಮಂಡಳಿಯೂ ನಗರಸಭೆಗೆ ಹಸ್ತಾಂತರಿಸಿದೆ.
ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಒಳಚರಂಡಿ ಮಂಡಳಿಯಿಂದ 97.11 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಈ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇದನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ಹೀಗಾಗಿ, ಈ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಐವರು ಅಧಿಕಾರಿಗಳು, 9 ಜನ ನಗರಸಭೆ ಸದಸ್ಯರು, ಗುತ್ತಿಗೆದಾರರು ಸೇರಿದಂತೆ 15 ಜನರ ವಿರುದ್ಧ ನಗರಸಭೆ ಸದಸ್ಯೆ ಮೇರಿ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಉಮೇಶ್, ಹಿಂದಿನ ಜಿಲ್ಲಾ ನಗರಾಭಿವೃಧ್ದಿ ಕೋಶ ಯೋಜನಾಧಿಕಾರಿ ಹಾಗೂ ಕೊಳ್ಳೇಗಾಲ ನಗರಸಭೆ ಹಿಂದಿನ ಪೌರಾಯುಕ್ತರಾಗಿದ್ದ ಕೆ.ಸುರೇಶ್, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕೊಳ್ಳೇಗಾಲ ನಗರಸಭೆ ಎಇಇ ಸಿ.ಎಂ.ನಟರಾಜು, ಇಂಜಿನಿಯರ್ ಗಂಗಾಧರ್, ಒಳಚರಂಡಿ ಗುತ್ತಿಗೆದಾರ ರಾಮೇಗೌಡ, ಕೊಳ್ಳೇಗಾಲ ನಗರಸಭೆ ಹಿಂದಿನ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ಎಸ್.ರಮೇಶ್, ಎ.ರೇಖಾ, ನಗರಸಭೆ ಪ್ರಭಾರ ಮಾಜಿ ಅಧ್ಯಕ್ಷೆ ಸುಶೀಲಾ, ಸದಸ್ಯೆ ಸುಬೇರ ಬೇಗಾಂ, ಶಾಂತರಾಜು, ಎ.ಪಿ.ಶಂಕರ್, ಜಿ.ಎಂ.ಸುರೇಶ್, ರಾಘವೇಂದ್ರ, ನಗರಸಭೆ ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಷ ಎಂಬುವರ ಮೇಲೆ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಕೆಯಾಗಿದೆ.
ಈ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರ ವಿರುದ್ಧ ಪ್ರಕರಣದಾಖಲಿಸಬೇಕು. ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರವೆಸಗಿರುವವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.