

ಚಾಮರಾಜನಗರ : ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಆರೋಗ್ಯ ಸಂಬಂಧದ ಮಾಹಿತಿಯನ್ನು ವೈಜ್ಞಾನಿಕವಾಗಿ ದಾಖಲೆ ಮಾಡಿಟ್ಟುಕೊಳ್ಳುವ ಇ-ಆಸ್ಪತ್ರೆ ಯೋಜನೆಯನ್ನು ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಅನುಷ್ಠಾನಗೊಳಿಸಲು ರಾಜ್ಯದಲ್ಲೇ ಪ್ರಥಮ ಬಾರಿಗೆ ಚಾಮರಾಜನಗರ ಆರೋಗ್ಯ ಇಲಾಖೆ ಮುಂದಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 2017 ರಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ‘ಇ-ಆಸ್ಪತ್ರೆ’ ಯೋಜನೆಯಡಿ ಆರೋಗ್ಯ ಸಂಬಂಧಿ ಸೇವೆಗಳನ್ನು ನೀಡಲಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ನಿರ್ವಹಿಸಲು ಇ-ಆಸ್ಪತ್ರೆ ಯೋಜನೆಯನ್ನು ರೂಪಿಸಲಾಯಿತು. ಪ್ರಾಯೋಗಿಕವಾಗಿ ಬೆಂಗಳೂರು, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಹಾಸನ, ಕೊಡುಗು, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಂತೆ 22 ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿತ್ತು. ಅದರಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆ, ಕೊಳ್ಳೇಗಾಲ, ಯಳಂದೂರು ಹಾಗೂ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿತ್ತು. ಪ್ರಸ್ತುತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮೊಬೈಲ್ ಯೂನಿಟ್‌ಗಳ ಸಹಿತ ಒಟ್ಟು 66 ಆಸ್ಪತ್ರೆಗಳನ್ನು ಇ-ಆಸ್ಪತ್ರೆ ಯೋಜನೆಯಡಿ ತರಲು ಮುಂದಾಗಿದೆ.
ಮೊದಲ ಹಂತದಲ್ಲಿ 2 ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟಾರೆ 22 ಆಸ್ಪತ್ರೆಗಳಲ್ಲಿ ಈಗಾಗಲೇ ಇ-ಆಸ್ಪತ್ರೆ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಉಳಿದ 44 ಆಸ್ಪತ್ರೆಗಳನ್ನು ಈ ಯೋಜನೆಯಡಿ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ಮೂಲಕ ಜಿಲ್ಲೆಯ ಯಾವುದೇ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ತಮ್ಮ ಆರೋಗ್ಯ ಸಂಬಂಧಿ ಮಾಹಿತಿಯನ್ನು ವೈಜ್ಞಾನಿಕವಾಗಿ ದಾಖಲೆ ರೂಪದಲ್ಲಿ ಪಡೆಯಬಹುದಾಗಿದೆ. ರೋಗಿಯು ಮುಂದೆ ಯಾವುದೇ ಸಂದರ್ಭದಲ್ಲಿ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದ್ದು, ರೋಗಿಯ ಮಾಹಿತಿ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯವಿರಲಿದೆ.
ಏನಿದು ಯೋಜನೆ?:
ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಹೋಗುವ ರೋಗಿಗಳ ನಿಖರವಾದ ಮಾಹಿತಿಯನ್ನು ವೈಜ್ಞಾನಿಕವಾಗಿ ಸಂರಕ್ಷಿಸಲಾಗುತ್ತಿರಲಿಲ್ಲ. ರೋಗಿಯೂ ಸಹ ತಮ್ಮಲ್ಲಿರುವ ಚಿಕಿತ್ಸೆ ಸಂಬಂಧಿ ಮಾಹಿತಿಯನ್ನು ಸರಿಯಾಗಿ ಇಟ್ಟುಕೊಳ್ಳುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಇ-ಆಸ್ಪತ್ರೆ ಸೇವೆಯಡಿ ಪ್ರತಿಯೊಬ್ಬ ರೋಗಿಗೂ ಬಾರ್‌ಕೋಡ್(ನಂಬರ್) ಒಳಗೊಂಡಿರುವ ಹೊರರೋಗಿ ಚೀಟಿಯನ್ನು ನೀಡಲಾಗುತ್ತದೆ. ಇದರಿಂದಾಗಿ ಆಸ್ಪತ್ರೆಗೆ ಬರುವ ಹೊರರೋಗಿ ಸಂಪೂರ್ಣ ವಿವರ, ತಪಾಸಣೆಯ ವೇಳೆ ಪತ್ತೆಯಾದ ರೋಗ, ಅದಕ್ಕೆ ನೀಡಿರುವ ಚಿಕಿತ್ಸೆ, ಲಭ್ಯವಿರುವ ಔಷಧವನ್ನು ಹೊರಗೆ ಖರೀದಿಸಲು ಮಾಡಿದ ಶಿಾರಸು, ಚಿಕಿತ್ಸೆ ನೀಡಿದ ವೈದ್ಯರು, ಪ್ರಯೋಗಾಲಯ, ಎಕ್ಸ್‌ರೇ ಹಾಗೂ ಇನ್ನಿತರ ತಪಾಸಣೆ ನಡೆಸಿದ ಸಿಬ್ಬಂದಿ ಹೆಸರು ಇದರಲ್ಲಿ ನಮೂದಾಗುತ್ತದೆ. ಈ ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸಲು ಇ-ಯೋಜನೆ ಅನುಕೂಲವಾಗಲಿದೆ. ಇದನ್ನು ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಣೆ ಮಾಡುತ್ತಿರುವುದು ಸಾರ್ವಜನಿಕರಿಗೆ ಅತ್ಯಂತ ಸಹಕಾರಿಯಾಗಿದೆ.
22 ಆಸ್ಪತ್ರೆಗಳಲ್ಲಿ ಇ-ಸೇವೆ:
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಮತ್ತು ಕಬ್ಬಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳು, ಚಾಮರಾಜನಗರ ತಾಲೂಕಿನ ಉಮ್ಮತ್ತೂರು, ಅರಳೀಕಟ್ಟೆ, ಹಳ್ಳಿಕೆರೆಹುಂಡಿ, ಬಿಸಲವಾಡಿ, ಆಲೂರು, ಅರಕಲವಾಡಿ ಮತ್ತು ಕೊತ್ತಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ, ಹೊರೆಯಾಲ, ಕೊಡಸೋಗೆ, ಪಡಗೂರು ಮತ್ತು ಹಸಗೂಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಹನೂರು, ಮಲೆ ಮಹದೇಶ್ವರಬೆಟ್ಟ, ರಾಮಾಪುರ, ಹುಂಡಿಪುರ ಮತ್ತು ಕೌದಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ, ಸತ್ತೇಗಾಲ ಹಾಗೂ ಯಳಂದೂರು ತಾಲೂಕಿನ ಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಒಳಗೊಂಡಂತೆ ಒಟ್ಟು 22 ಆಸ್ಪತ್ರೆಗಳಲ್ಲಿ ಇ-ಸೇವೆ ಕಾರ್ಯಾರಂಭ ಮಾಡಲಾಗಿದೆ. ಶೀಘ್ರದಲ್ಲೇ ಜಿಲ್ಲೆಯ ಉಳಿದ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮೊಬೈಲ್ ಯೂನಿಟ್‌ಗಳಲ್ಲೂ ಇ-ಆಸ್ಪತ್ರೆ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಿದಂಬರಂ ವಿಜಯವಾಣಿಗೆ ಮಾಹಿತಿ ನೀಡಿದರು.
ರೋಗಿಗಳಿಗೆ ಸಹಕಾರಿ:
ಗ್ರಾಮಾಂತರ ಪ್ರದೇಶದ ಜನರು ಹೆಚ್ಚಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳುತ್ತಾರೆ ಈ ಸಂದರ್ಭದಲ್ಲಿ ಇ-ಆಸ್ಪತ್ರೆ ಯೋಜನೆಯಿಂದ ಸಹಕಾರಿಯಾಗುತ್ತದೆ. ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಲ್ಯಾಬ್, ಲೇಬರ್, ಟೆಲಿ ಮೆಡಿಸಿನ್ ಮೂಲಕ ತಜ್ಞರೊಂದಿಗೆ ಆನ್‌ಲೈನ್ ಸಮಾಲೋಚನೆ ಮತ್ತಿತರ ತಪಾಸಣೆ ವರದಿಯ ಮೆಸೇಜ್ ರೋಗಿಯ ಮೊಬೈಲ್‌ಗೆ ರವಾನೆಯಾಗುತ್ತದೆ. ಆಸ್ಪತ್ರೆಯಲ್ಲಿ ತಾನು ಭೇಟಿಯಾಗಬೇಕಿರುವ ತಜ್ಞರು ಹಾಗೂ ವಿಶೇಷ ತಜ್ಞರ ಸಂದರ್ಶನವನ್ನು ಆನ್‌ಲೈನ್ ಮೂಲಕ ಪೂರ್ವ ಸಂದರ್ಶನ ಸಮಯ ನಿಗದಿಪಡಿಸಿಕೊಂಡು ವೈದ್ಯರ ಭೇಟಿಗೆ ಹೋಗಬಹುದಾಗಿದೆ. ಇದರಿಂದ ವೈದ್ಯರು ತಮ್ಮದೇ ಆದ ‘ಐಡಿ’ಯಲ್ಲಿ ಲಾಗ್ ಇನ್ ಆಗಿ ಚಿಕಿತ್ಸೆ ನೀಡಬೇಕಿರುತ್ತದೆ. ಆಗಾಗಿ ರೋಗಿಯ ಆರೋಗ್ಯದಲ್ಲಿ ವ್ಯತ್ಯಾಸವಾದರೆ ವೈದ್ಯರು ಯಾವ ರೀತಿಯ ಚಿಕಿತ್ಸೆ ನೀಡಿದ್ದರು. ಎಲ್ಲಿ ಲೋಪ ಆಯಿತು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ರೋಗಿಗಳಿಗೆ ಇ-ಆಸ್ಪತ್ರೆ ಸಾಕಷ್ಟು ಸಹಕಾರಿಯಾಗಲಿದೆ.
ಜಿಲ್ಲೆಯ ಎಲ್ಲ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇ-ಆಸ್ಪತ್ರೆ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಜವಾಬ್ದಾರಿ ನೀಡಿದ್ದರು. ಈಗ 22 ಆಸ್ಪತ್ರೆಗಳಲ್ಲಿ ಕಾರ್ಯಾರಂಭ ಮಾಡಲಾಗಿದೆ. ಜಿಲ್ಲೆಯಲ್ಲಿ ಎಲ್ಲಿ ನೆಟ್‌ವರ್ಕ್ ಸಮಸ್ಯೆ ಇಲ್ಲ, ಅಲ್ಲೆಲ್ಲ ಕಡೆಗಳಲ್ಲೂ ಇ-ಆಸ್ಪತ್ರೆ ಯೋಜನೆ ಅನುಷ್ಠಾನ ಮಾಡುತ್ತೇವೆ.ಡಾ.ಚಿದಂಬರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಚಾಮರಾಜನಗರ.