

ಕೊಳ್ಳೇಗಾಲ: ದ್ವೀಪ ಗ್ರಾಮದ ಯಡಕುರಿಯ ಸಮೀಪದ ಕಾವೇರಿ ನದಿ ದಡದಲ್ಲಿ ಶನಿವಾರ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ.
ಸತ್ತೇಗಾಲ ಗ್ರಾಮದ ನಂಜುಂಡಸ್ವಾಮಿ (34) ಮೊಸಳೆ ದಾಳಿಗೆ ಒಳಗಾದವರು. ಇವರು ನೀರು ತೆಗೆದುಕೊಳ್ಳಲು ಯಡಕುರಿಯ ಸೇತುವೆ ಸಮೀಪ ಕಾವೇರಿ ನದಿಗೆ ಇಳಿದಿದ್ದಾಗ ಮೊಸಳೆ ಇವರ ಮೇಲೆ ಎರಗಿದೆ. ಈ ವೇಳೆ ಆತನನ್ನು ನೀರಿನೊಳಗೆ ಎಳೆದೊಯ್ಯಲು ಯತ್ನಿಸಿ ಸಾಧ್ಯವಾಗದೆ ಬಿಟ್ಟಿ ಹೋಗಿದೆ. ಈ ಎಳೆದಾಟದಲ್ಲಿ ನಂಜುಂಡಸ್ವಾಮಿ ಬಲಗೈಗೆ ಮುರಿದಿದೆ. ಮುಖದ ಮೇಲೂ ಗಾಯಗಳಾಗಿವೆ.
ನಂಜುಂಡಸ್ವಾಮಿ ದುಡಿಯುವ ವ್ಯಕ್ತಿಯಾಗಿದ್ದು, ಕುಟಂಬಕ್ಕೆ ಆಸರೆಯಾಗಿದ್ದರು. ಆದರೆ, ಈ ಮೊಸಳೆ ದಾಳಿಗೆ ಸಿಲುಕಿ ತೀವ್ರ ಗಾಯಗೊಂಡಿದ್ದಾರೆ. ಕೈ ಮೂಳೆ ಕೂಡ ಮುರಿದಿದೆ. ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಹಾರ ನೀಡಬೇಕು ಎಂದು ಗಾಯಾಳು ಸಹೋದರ ಪ್ರದೀಪ್ ಒತ್ತಾಯಿಸಿದ್ದಾರೆ.
ಮೊಸಳೆ ಈ ಹಿಂದೆಯೂ ಎರಡು ಬಾರಿ ಪ್ರಾಣಿ-ಪಕ್ಷಿ ಮೇಲೆ ದಾಳಿ ಮಾಡಿತ್ತು. ಇತ್ತೀಚೆಗೆ ಯಡಕುರಿಯ ಕಾವೇರಿ ನದಿ ದಡದಲ್ಲಿ ಆಟವಾಡುತ್ತಿದ್ದ ಪಾರಿವಾಳದ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಅಲ್ಲದೇ, ಶಿವಸ್ವಾಮಿ ಎಂಬುವರ ಮೇಕೆಯೊಂದು ನೀರು ಕುಡಿಯಲು ಹೋಗಿದ್ದಾಗ ಅದನ್ನು ನೀರಿನೊಳಗೆ ಎಳೆದೋಯ್ಯಲು ಯತ್ನಿಸಿತ್ತು. ಇದರಿಂದ ಮೇಕೆ ಮೃತಪಟ್ಟಿತ್ತು. ಇದೀಗ ಮನುಷ್ಯನ ಮೇಲೆ ದಾಳಿ ಮಾಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮೊಸಳೆ ದಾಳಿಗೆ ಒಳಗಾದ ನಂಜುಂಡಸ್ವಾಮಿ ಅವರನ್ನು ಭೇಟಿ ಮಾಡಿದ್ದೇವೆ. ಅರಣ್ಯ ಇಲಾಖೆಯಿಂದ ವ್ಯೆದ್ಯಕೀಯ ವೆಚ್ಚಕ್ಕೆ ಪರಿಹಾರ ನೀಡುತ್ತೇವೆ. ಸತ್ತೇಗಾಲ ಗ್ರಾ.ಪಂ.ವತಿಯಿಂದ ನದಿಗೆ ಜನರು ಇಳಿಯದ ರೀತಿ ಜಾಗೃತಿ ಮೂಡಿಸಲಾಗುವುದು.
ಭರತ್, ಆರ್‌ಎಫ್‌ಒ, ಕೊಳ್ಳೇಗಾಲ ಬಫರ್ ವಲಯ.