ಪಠ್ಯ ಪುಸ್ತಕ, ಪ್ರಯೋಗಾಲಯದ ಪರಿಕರ ವಿತರಣೆ

Oplus_0
Oplus_0
Published on

ಯಳಂದೂರು : ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮೈಸೂರಿನ ವಿವೇಕಾನಂದ ಯೂತ್ ಮೂವ್‌ಮೆಂಟ್‌ನಿಂದ ಶನಿವಾರ ವಿಜ್ಞಾನ ಪ್ರಯೋಗಾಲಯದ ಪರಿಕರಗಳು ಹಾಗೂ ಗ್ರಂಥಾಲಯಕ್ಕೆ ಅಗತ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.

ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಚಾಲಕ ರವಿ ಮಾತನಾಡಿ, ನಮ್ಮ ಸಂಘಟನೆಯಿಂದ ಗ್ರಾಮೀಣ ಭಾಗದಲ್ಲಿ ವ್ಯಾಸಂಗ ಮಾಡುವ ಶಾಲೆಗಳಿಗೆ ಪ್ರತಿ ವರ್ಷವೂ ಪುಸ್ತಕ, ವಿಜ್ಞಾನ ಪ್ರಯೋಗಾಲಯದ ಪರಿಕರಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಬಾರಿ ಗುಡ್ಡಗಾಡು ಪ್ರದೇಶದಲ್ಲಿರುವ ಮುರಾರ್ಜಿ ಶಾಲೆಯನ್ನು ಇದಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಶಾಲೆಯಲ್ಲಿ ಪ್ರಯೋಗಾಲಯದಲ್ಲಿ ಬಳಸಲಾಗುವ ಪಠ್ಯಕ್ಕೆ ಸಂಬಂಧಿಸಿದ ಆ್ಯಸಿಡ್‌ಗಳು, ಮೈಕ್ರೋಸ್ಕೋಪ್, ಕ್ರೋನಿಕಲ್ ಪ್ಲಾಸ್ಕ್, ಸಿಂಪಲ್ ಪೆಂಡೂಲಮ್, ಚಾರ್ಟ್‌ಗಳು, ಆಯಸ್ಕಾಂತ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಇದರೊಂದಿಗೆ ಇಲ್ಲಿನ ಗ್ರಂಥಾಲಯಕ್ಕೆ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಂಬಂಧಪಟ್ಟ 50 ಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಲಾಗಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು, ಮಕ್ಕಳಿಗೆ ಸುಲಭವಾಗಿ ಕಲಿಯಲು ಸಹಕರಿಸುವಂತಹ ಪುಸ್ತಕಗಳನ್ನು ನೀಡಲಾಗುತ್ತಿದೆ. ಇಲ್ಲಿನ ಶಿಕ್ಷಕರು ಇದರ ಸದ್ಬಳಕೆ ಮಾಡಿಕೊಂಡು ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮೌಲ್ಯಯುತ ಶಿಕ್ಷಣ ನೀಡಿ ಇವರನ್ನು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಶಿಕ್ಷಕ ಸುನಿಲ್‌ಕುಮಾರ್ ಮಾತನಾಡಿ, ನಮಗೆ ನೀಡಿರುವ ವಿಜ್ಞಾನ ಪರಿಕರಗಳು ಹಾಗೂ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತೇವೆ. ನಮ್ಮ ಶಾಲೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಪ್ರತಿ ವರ್ಷವೂ ಎಸ್‌ಎಸ್‌ಎಲ್‌ಸಿಯಲ್ಲಿ ಈ ಶಾಲೆ ಶೇ. 100 ರಷ್ಟು ಫಲಿತಾಂಶ ಪಡೆಯುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲೂ ಪ್ರತಿಭಾವಂತರಿದ್ದು ಇಂತಹ ಸಂಘ ಸಂಸ್ಥೆಗಳು ಕೈಜೋಡಿಸಿದ್ದಲ್ಲಿ ಇವರನ್ನು ಕಲಿಕೆಯಲ್ಲಿ ಇನ್ನಷ್ಟು ಸಕ್ರೀಯಗೊಳಿಸುವ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು. ಶಿಕ್ಷಕರಾದ ತ್ಯಾಗರಾಜು, ಉಮೇಶ, ಮಮತಾ, ಚಿನ್ನಮುತ್ತು, ರಾಜಶೇಖರ್, ರಂಗನಾಥ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net