ಸರ್ಕಾರಿ ಶಾಲೆ ಉಳಿವಿಗೆ ಶ್ರಮ ಶ್ಲಾಘನೀಯ

09-GPT-2
Published on

ಗುಂಡ್ಲುಪೇಟೆ: ಯುವಕರು ಸಂಘಟಿತರಾಗಿ ಗ್ರಾಮದ ಸರ್ಕಾರಿ ಶಾಲೆಯ ಉಳಿವಿಗೆ ಕಾರ್ಯಪ್ರವೃತ್ತರಾಗಿರುವುದು ಅಭಿನಂದನಾರ್ಹ ಎಂದು ಭೀಮನಬೀಡು ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ಹೇಳಿದರು.

ತಾಲೂಕಿನ ಕುಂದಕೆರೆ ಗ್ರಾಮದ ಕಾಯಕವೇ ಕೈಲಾಸ ಟ್ರಸ್ಟ್ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 80 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ನೋಟ್‌ಬುಕ್, ಗುರುತಿನ ಚೀಟಿ, ಬೆಲ್ಟ್ ಹಾಗೂ ಜಾಮಿಟ್ರಿ ಬಾಕ್ಸ್‌ಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.

ಶಿಕ್ಷಣ ದೊಡ್ಡ ಶಕ್ತಿಯಾಗಿದ್ದು ಶಿಕ್ಷಣದಿಂದಲೇ ಎಲ್ಲವನ್ನೂ ಸಾಧಿಸಬಹುದು. ಆದರೆ, ಗ್ರಾಮಾಂತರ ಪ್ರದೇಶದ ಪಾಲಕರು ತಮ್ಮ ಮಕ್ಕಳನ್ನು ಪಟ್ಟಣದ ಕಾನ್ವೆಂಟ್‌ಗಳಿಗೆ ಸೇರಿಸುತ್ತಿರುವುದು ಗ್ರಾಮಾಂತರ ಪ್ರದೇಶಗಳ ಶಾಲೆಗಳಲ್ಲಿ ಮಕ್ಕಳ ಕೊರತೆಯಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಗ್ರಾಮಾಂತರ ಮಕ್ಕಳ ಕಲಿಕೆಗೆ ದೊಡ್ಡ ಸಮಸ್ಯೆಯಾಗುತ್ತದೆ. ಈ ನಿಟ್ಟಿನಲ್ಲಿ ಕುಂದಕೆರೆ ಗ್ರಾಮದ ಯುವಕರು ತಮ್ಮ ಶಾಲೆಯ ಉಳಿವಿಗಾಗಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾಡಬೇಕಾದ ಕೆಲಸಗಳನ್ನು ತಾವೇ ಕೈಗೆತ್ತಿಕೊಂಡಿದ್ದಾರೆ. ದಾಖಲಾತಿ ಆಂದೋಲನ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಪರಿಕರಗಳನ್ನು ತಮ್ಮ ಟ್ರಸ್ಟ್ ವತಿಯಿಂದಲೇ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಪಿ.ಮಂಜಣ್ಣ, ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಎಂ.ಚಂದ್ರಶೇಖರಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಆರ್.ಸಿ. ಡಾ.ಸರೋಜಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ, ಶಿಕ್ಷಕ ನಂದೀಶ್, ರೈತ ಮುಖಂಡ ಸಂಪತ್ತು, ಗ್ರಾಮಪಂಚಾಯಿತಿ ಅಧ್ಯಕ್ಷ ಸಿದ್ದರಾಜು, ಸದಸ್ಯರಾದ ಚನ್ನಬಸಪ್ಪ, ಕೆ.ಎಂ.ಸುರೇಂದ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net