ಸಂತೇಮರಹಳ್ಳಿ ಆಸ್ಪತ್ರೆಗೆ ನ್ಯಾಯಾಧೀಶರು ಭೇಟಿ

10raju6
Published on

ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ್ ಇತ್ತೀಚಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿರುವ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದೆಯೇ ಎಂಬ ಬಗ್ಗೆ ಪರಿಶೀಲಿಸಿದರು. ಮುಂಗಾರು ಮಳೆ ಹಾಗೂ ಅತಿವೃಷ್ಟಿ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರೋಗಿಗಳಿಗೆ ತ್ವರಿತವಾಗಿ ವೈದ್ಯಕೀಯ ಸೇವೆಯನ್ನು ನೀಡಲು ಆಸ್ಪತ್ರೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಅಗತ್ಯ ಔಷಧಗಳ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.

ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಚಿಕಿತ್ಸೆ, ಔಷಧೋಪಚಾರಗಳ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು. ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ವೀಕ್ಷಿಸಿದರು. ಆಸ್ಪತ್ರೆಯಲ್ಲಿ ಉತ್ತಮವಾಗಿ ವೈದ್ಯಕೀಯ ಚಿಕಿತ್ಸೆ ಸೇವೆ ಸಿಗುತ್ತಿದೆ ಎಂದು ಒಳರೋಗಿಗಳು ತಿಳಿಸಿದರು.

ತುರ್ತು ಅವಶ್ಯಕತೆಗಾಗಿ ಆಮ್ಲಜನಕ ಪ್ಲಾಂಟ್ ಅನ್ನು ಕೂಡಲೇ ದುರಸ್ತಿಗೊಳಿಸಬೇಕು. ಆಸ್ಪತ್ರೆಯ ವೈಧ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಸೇವಾ ಮನೋಭಾವನೆ ಮುಂದುವರಿಸಿಕೊಂಡು ಹೋಗಬೇಕೆಂದು ತಿಳಿಸಿದರು.
ಕಾನೂನು ನೆರವಿನ ಅಗತ್ಯವಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ತಾಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬಹುದೆಂದು ಸಲಹೆ ನೀಡಿದರು. ಡಾ.ರೇಣುಕಾ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net