ಇಂದಿರಾ ಕ್ಯಾಂಟಿನ್‌ಗೆ 5 ಲಕ್ಷ ರೂ. ಅನುದಾನ

08rajesh2
Published on

ಚಾಮರಾಜನಗರ : ಬಡವರು ಮತ್ತು ಮಧ್ಯಮ ವರ್ಗದವರಿಗೆ ಕನಿಷ್ಠ ಬೆಲೆಯಲ್ಲಿ ಆಹಾರ ಪೂರೈಸುವ ಉದ್ದೇಶದಿಂದ ಆರಂಭಿಸಿರುವ ಇಂದಿರಾ ಕ್ಯಾಂಟಿನ್‌ಗೆ ಮೂಲಸೌಕರ್ಯ ಕಲ್ಪಿಸಲು ನಗರಸಭೆ ಮುಂದಾಗಿದೆ.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಭವನದ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟಿನ್ ಅನ್ನು 2018 ರಲ್ಲಿ ಪ್ರಾರಂಭಿಸಲಾಗಿದ್ದು, ಅಂದಿನಿಂದಲೂ ಇಂದಿನವರೆಗೂ ಹಲವು ಅಡೆತಡೆಗಳ ನಡುವೆಯೂ ಸುಲಲಿತವಾಗಿ ನಡೆದುಕೊಂಡು ಬಂದಿದೆ.

ಬಡವರು, ಮಧ್ಯಮವರ್ಗದ ಜನರು, ದಿನಗೂಲಿ ಕೆಲಸಗಾರರು ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಪೂರೈಕೆ ಮಾಡಿಕೊಂಡು ಬರುತ್ತಿದೆ. ಆದರೆ ಸುಮಾರು 6 ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡ ಮಳೆ ಬಂದರೆ ಕೆಲವು ಕಡೆ ಸೋರುತ್ತಿದೆ. ಕಟ್ಟಡದ ನೆಲಹಾಸು ಅಲ್ಲಲ್ಲಿ ಕಿತ್ತು ಬಂದಿದ್ದು, ಮೂಲ ಸೌಕರ್ಯ ಕಾಣದೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಈ ನಡುವೆ ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಸಿ.ಟಿ.ಶಿಲ್ಪಾನಾಗ್ ಅವರು ಇತ್ತೀಚೆಗೆ ನಗರದ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಅಲ್ಲಿನ ಆಹಾರ ಗುಣಮಟ್ಟ ಹಾಗೂ ಮೂಲಸೌಕರ್ಯವನ್ನು ಪರಿಶೀಲಿಸಿ ಕೂಡಲೇ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ನಗರಸಭಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ಅದರಂತೆ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂದಿರಾ ಕ್ಯಾಂಟಿನ್ ಮೂಲ ಸೌಕರ್ಯ ಅಭಿವೃದ್ಧಿಗೆ ಅಂದಾಜು 5 ಲಕ್ಷ ರೂ. ಅನುದಾನ ಮೀಸಲಿರಿಸಿದ್ದಾರೆ. ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ತಕ್ಷಣ ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ ಎಂದು ನಗರಸಭಾ ಪೌರಾಯುಕ್ತ ರಾಮದಾಸ್ ವಿಜಯವಾಣಿಗೆ ಮಾಹಿತಿ ನೀಡಿದರು.

ಮೂಲಸೌಕರ್ಯ ಕೊರತೆಯಿತ್ತು
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಇಂದಿರಾ ಕ್ಯಾಂಟಿನ್ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ನಿತ್ಯವೂ ಭೇಟಿ ನೀಡುತ್ತಾರೆ. ಆದರೆ ಇಂದಿರಾ ಕ್ಯಾಂಟಿನ್‌ನಲ್ಲಿ ಸಾಕಷ್ಟು ಮೂಲ ಸೌಕರ್ಯ ಸಮಸ್ಯೆಗಳು ಕಂಡುಬರುತ್ತಿತ್ತು. ಮಳೆ ಬಂದಾಗ ಕ್ಯಾಂಟಿನ್ ಸುತ್ತಲಿನ ಪ್ರದೇಶ ಜಲಾವೃತವಾಗುತ್ತಿತ್ತು. ಸುಮಾರು 6 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡವಾಗಿರುವುದರಿಂದ ಮಳೆ ಬಂದಾಗ ಕಟ್ಟಡ ಅಲ್ಲಲ್ಲಿ ಸೋರುತ್ತಿತ್ತು. ಪರಿಣಾಮವಾಗಿ ನೆಲಹಾಸು ಕಿತ್ತುಬಂದಿತ್ತು. ಕುಡಿಯುವ ನೀರಿನ ಟ್ಯಾಂಕ್ ಹಾಗೂ ಕೈ ತೊಳೆಯುವ ಸ್ಥಳ ಕೊಳಚೆಯಿಂದ ಕೂಡಿತ್ತು. ಕಟ್ಟದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಕೆಟ್ಟು ಹೋಗಿತ್ತು. ಅಲ್ಲದೆ ವಿದ್ಯುತ್ ದೀಪಗಳು ಕೆಟ್ಟು ಹೋಗಿತ್ತು. ಶೌಚಾಲಯದಲ್ಲೂ ಅಶುಚಿತ್ವತೆ ತಾಂಡವವಾಡುತ್ತಿತ್ತು. ಈ ನಡುವೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಕೂಡಲೇ ಮೂಲಸೌಕರ್ಯ ಕಲ್ಪಿಸುವಂತೆ ಹಾಗೂ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ನಗರಸಭಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅಂದಾಜು 5 ಲಕ್ಷ ರೂ. ಅನುದಾನ:
ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದಿರಾ ಕ್ಯಾಂಟಿನ್ ಮೂಲಸೌಕರ್ಯ ಅಭಿವೃದ್ಧಿಗೆ ಅಂದಾಜು 5 ಲಕ್ಷ ರೂ. ಅನುದಾನವನ್ನು ನಗರಸಭೆ ಮೀಸಲು ಇರಿಸಿದ್ದು, ಅಂದಾಜುಪಟ್ಟಿ ತಯಾರಿಸಲಾಗಿದೆ. ಆ ಅನುದಾನದಲ್ಲಿ ಕಟ್ಟಡದಲ್ಲಿ ನೀರು ಸೋರುವುದರ ದುರಸ್ತಿ, ಅಡುಗೆ ಸಾಮಗ್ರಿಗಳ ಖರೀದಿ ಅಥವಾ ರಿಪೇರಿ ಮಾಡುವುದು, ನೆಲಹಾಸಿಗೆ ಟೈಲ್ಸ್ ಅಳವಡಿಸುವುದು, ಕೈ ತೊಳೆಯುವ ಬೇಸನ್ ಹಾಗೂ ಕುಡಿಯುವ ನೀರನ ಯಂತ್ರಗಳ ರಿಪೇರಿ, ಸಿಸಿಟಿವಿ ಕ್ಯಾಮರಾಗಳ ರಿಪೇರಿ ಸೇರಿದಂತೆ ಸ್ವಚ್ಛತೆಗೆ ಸಂಬಂಧಿಸಿದ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ಮಾಡಲಾಗುತ್ತದೆ. ಇದಲ್ಲದೇ ಜಿಲ್ಲಾಧಿಕಾರಿ ಸೂಚನೆಯಂತೆ ನಗರಸಭೆ ವತಿಯಿಂದ ಒಬ್ಬರು ಅಧಿಕಾರಿಯನ್ನು ನೇಮಿಸಿ ಗುಣಮಟ್ಟದ ಆಹಾರ ಪೂರೈಕೆಗೆ ಒತ್ತು ನೀಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ರಾಮದಾಸ್ ವಿಜಯವಾಣಿಗೆ ಮಾಹಿತಿ ನೀಡಿದರು.

ಈ ಹಿಂದೆ ಜಿಲ್ಲಾಧಿಕಾರಿಗಳು ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಮೂಲಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ 5 ಲಕ್ಷ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ಈಗಾಗಲೇ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net