ಉಪ್ಪಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಅಗತ್ಯ

Published on

ಚಾಮರಾಜನಗರ : ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿಯಾಗಿರುವುದರಿಂದ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಸಲಹೆ ನೀಡಿದರು.

ನಗರದ ಚೆನ್ನಿಪುರದಮೋಳೆಯಲ್ಲಿರುವ ಶ್ರೀಭಗೀರಥ ಫೌಂಡೇಶನ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸಮುದಾಯದ ಮಕ್ಕಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90 ರಷ್ಟು ಫಲಿತಾಂಶ ಪಡೆಯುತ್ತಿರುವುದು ತುಂಬ ಖುಷಿಯಾಗಿದೆ. ವಿದ್ಯಾರ್ಥಿಗಳು ದೊಡ್ಡಕನಸು ಇಟ್ಟುಕೊಂಡು ಶ್ರದ್ಧೆ, ಭಕ್ತಿಯಿಂದ ವ್ಯಾಸಂಗ ಮಾಡಬೇಕು. ಪೋಷಕರು ಕೂಡ ಮಕ್ಕಳ ವಿದ್ಯಾರ್ಜನೆಗೆ ಪೋತ್ಸಾಹ ನೀಡಬೇಕಿದೆ ಎಂದರು.

ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಬದುಕು ಹಸನು ಮಾಡಿಕೊಳ್ಳಬೇಕಾದರೆ ಶಿಕ್ಷಣ ಅತ್ಯಗತ್ಯವಾಗಿದೆ. ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಶಿಕ್ಷಣವೇ ಮೂಲವಾಗಿದೆ. ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದರೂ ಕೂಡ ಉಪ್ಪಾರ ಸಮುದಾಯ ಶಿಕ್ಷಣದಿಂದ ವಂಚಿತರಾಗಿರುವುದು ಬಹಳ ನೋವಿನ ಸಂಗತಿಯಾಗಿದೆ. ಹಾಗಾಗಿ ಉಪ್ಪಾರ ಸಮಾಜದ ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರೆ ಸಮಾಜದಲ್ಲಿ ಒಳ್ಳೆಯ ವಿದ್ಯಾವಂತರಾಗಿ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೀರ್ತಿ ತರುತ್ತಾರೆ. ಕಂದಚಾರ, ಮೂಢನಂಬಿಕೆ ತ್ಯಜಿಸಿ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಶಿಕ್ಷಣ ಕಲಿತರೆ ಹೆಚ್ಚಿನ ಗೌರವ ಲಭಿಸುತ್ತದೆ. ಸಮುದಾಯದ ಮಕ್ಕಳು ಚೆನ್ನಾಗಿ ಓದಿ ಅಧಿಕಾರಿಗಳಾಗುತ್ತಿದ್ದಾರೆ. ಈಗಾಗಲೇ ವೈದ್ಯರು, ನ್ಯಾಯಾಧೀಶರು, ವಕೀಲರು, ಎಂಜಿನಿಯರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಅಧಿಕಾರಿಗಳಾಗಿ ಸಮಾಜಸೇವೆ ಮಾಡಬೇಕು ಎಂದರು.

ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹರ್ಷಿತ, ಸಂಜನಾಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶ್ರೀಭಗೀರಥ ಫೌಂಡೇಶನ್ ಅಧ್ಯಕ್ಷ ಡೇರಿ ಮಹದೇವಶೆಟ್ಟಿ, ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಆರ್.ಮಹದೇವಶೆಟ್ಟಿ, ಗೌರವಾಧ್ಯಕ್ಷ ಸಿ.ಬಿ.ನಾಗರಾಜು, ಸಿ.ರಾಜು, ಮಹದೇವಶೆಟ್ಟಿ, ನಾಗರಾಜು, ಕೋರಿಯರ್ ಮಹದೇವಸ್ವಾಮಿ, ಪ್ರವೀಣ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net