

ಚಾಮರಾಜನಗರ: ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ವತಿಯಿಂದ ಗುರುವಾರ ಆಯೋಜಿಸಿದ್ದ ಗ್ರಾಮಾಂತರ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು.
ನಗರದ ಶ್ರೀವಿರಕ್ತ ಮಠದ ಆವರಣದಲ್ಲಿ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಭಕ್ತ ವೃಂದದ ವತಿಯಿಂದ ಆಯೋಜಿಸಲಾಗಿದ್ದ ಪೂಜ್ಯಧ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಗ್ರಾಮಾಂತರ ಬಸವ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮಕ್ಕೆ ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತಸ್ವಾಮೀಜಿ, ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಅಲಂಕೃತ ರಥದಲ್ಲಿ ಅಳವಡಿಸಿದ್ದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಶ್ರೀವಿರಕ್ತ ಮಠದ ಮುಂಭಾಗದಿಂದ ಸಾಗಿದ ಮೆರವಣಿಗೆ ಬಿ.ರಾಚಯ್ಯ ಜೋಡಿರಸ್ತೆ, ಶ್ರೀಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ ಹಾಗೂ ಜೋಡಿರಸ್ತೆ ಮಾರ್ಗವಾಗಿ ಸಾಗಿ ಶ್ರೀಮಠದಲ್ಲಿ ಅಂತ್ಯವಾಯಿತು. ಶ್ರೀಬಸವೇಶ್ವರರ ಭಾವಚಿತ್ರದ ಮೆರವಣಿಗೆ ಜಾನಪದ ಕಲಾ ತಂಡಗಳ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಬಂದ ಸಾವಿರಾರು ಸಂಖ್ಯೆಯ ವೀರಶೈವ ಲಿಂಗಾಯತರು, ಬಸವ ಅನುಯಾಯಿಗಳು ಮೆರವಣಿಗೆಯಲ್ಲಿ ಹಾಗೂ ಮಠದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.