

ಕೊಳ್ಳೇಗಾಲ; ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಯುವ ಜೋಡಿ ರಕ್ಷಣೆ ನೀಡುವಂತೆ ಇತ್ತೀಚೆಗೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿತ್ತು.
ತಾಲೂಕಿನ ಸತ್ತೇಗಾಲ ಗ್ರಾಮದ ಆಕಾಶ್(22) ಹಾಗೂ ಹೊಳೆಸಾಲು ಗ್ರಾಮ ಬೆಳಕವಾಡಿಯ ರಕ್ಷಿತಾ (22) ಪ್ರೀತಿಸಿ ಮದುವೆಯಾಗಿರುವ ನವ ಜೋಡಿ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಕ್ಷಿತಾ ಮತ್ತು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಕಾಶ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪ್ರೀತಿಸಿ ಮದುವೆ ಆಗಲು ತೀರ್ಮಾನಿಸಿದ್ದರು. ಆದರೆ ಈ ಬಗ್ಗೆ ತಿಳಿದ ರಕ್ಷಿತಾ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.
ಈ ನಡುವೆ ಆಕಾಶ್ ಹಾಗೂ ರಕ್ಷಿತಾ ಜೂ.3 ರಂದು ಬೆಳಗ್ಗೆ ಅಗರ-ಮಾಂಬಳ್ಳಿ ಹಿಂಡಿ ಮಾರಮ್ಮನ ದೇವಸ್ಥಾನದಲ್ಲಿ ವಿವಾಹವಾದರು. ಮದುವೆ ಆದ ತಕ್ಷಣವೇ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪಿಎಸ್‌ಐ ಗಣೇಶ್ ಅವರಿಗೆ ಪ್ರೀತಿಸಿ ಮದುವೆ ಆಗಿರುವ ಬಗ್ಗೆ ಮಾಹಿತಿ ನೀಡಿ ರಕ್ಷಣೆ ಕೇಳಿದ್ದಾರೆ. ಇಬ್ಬರು ಪ್ರಾಪ್ತ ವಯಸ್ಸಿನವರಾದ ಕಾರಣ ಪಿಎಸ್‌ಐ ಗಣೇಶ್ ನವ ಜೋಡಿಗಳಿಗೆ ಧೈರ್ಯ ತುಂಬಿದ್ದಾರೆ. ಕಾನೂನುಬದ್ಧವಾಗಿ ಮದುವೆ ಮಾಡಿಕೊಳ್ಳುವಂತೆ ಸಲಹೆ ನೀಡಿ ಕಳುಹಿಸಿದ್ದಾರೆ.