

ಗುಂಡ್ಲುಪೇಟೆ: ಹಿಂದಿನವರಿಗೆ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿಯಿದ್ದ ಕಾರಣ ನಾವು ಇನ್ನೂ ಉಸಿರಾಡಲು ಸಾಧ್ಯವಾಗಿದ್ದು, ಇದನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಸಸಿಗಳನ್ನು ನೆಟ್ಟು ಬೆಳೆಸಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿಶಾಲೆ ಹಾಗೂ ಬಲಚವಾಡಿ ಪುಟ್ಟಬಸಪ್ಪ ಸರ್ಕಾರಿ ಪ್ರೌಢಶಾಲೆಗಳಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಬಾರಿಯ ದಿನಾಚರಣೆ ಭೂಮಿಯನ್ನು ಸುಸ್ಥಿರ ಸ್ಥಿತಿಗೆ ಮರಳಿಸುವ ಘೋಷವಾಕ್ಯದೊಡನೆ ವಿಶ್ವ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುತ್ತಿದೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ನಿರಂತರವಾಗಿ ಮರಗಳನ್ನು ಕಡಿಯಲಾಗುತ್ತಿದ್ದು, ಇದರಿಂದ ಹಕ್ಕಿ, ಚಿಟ್ಟೆ, ಜೇನುಹುಳುಗಳು ವಿನಾಶದಂಚಿಗೆ ಬಂದು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಮಹದೇವಪ್ರಸಾದ್, ಶಿಕ್ಷಕರಾದ ಮುಮ್ತಾಜ್ ಬೇಗಂ, ಮಂಜುನಾಥ್ ಮತ್ತಿತರರಿದ್ದರು.