

ಗುಂಡ್ಲುಪೇಟೆ; ಪಟ್ಟಣದ ಪೊಲೀಸರು ರಸ್ತೆಗಿಳಿದು ಹೆಲ್ಮೆಟ್ ಧರಿಸದ ಪ್ರಯಾಣಿಕರಿಗೆ ದಂಡ ವಿಧಿಸುವ ಮೂಲಕ ಚುರುಕು ಮುಟ್ಟಿಸಲಾರಂಭಿಸಿದ್ದಾರೆ.
ಕಳೆದ 4-6 ತಿಂಗಳಿನಿಂದ ಪರೀಕ್ಷೆಗಳು ಹಾಗೂ ಚುನಾವಣೆ ಮುಂತಾದ ಕರ್ತವ್ಯಗಳಲ್ಲಿ ನಿರತರಾಗಿದ್ದ ಪೊಲೀಸರು ಗುರುವಾರ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ, ದ್ವಿಚಕ್ರವಾಹನಗಳ ಮಾಲೀಕರಿಗೆ ದಂಡ ವಿಧಿಸಿದರು. ಪೊಲೀಸರು ತಪಾಸಣೆ ಕೈಗೊಂಡಿರುವ ಬಗ್ಗೆ ಮಾಹಿತಿ ಇಲ್ಲದ ದ್ವಿಚಕ್ರ ವಾಹನ ಸವಾರರು ಮಡಹಳ್ಳಿ ವೃತ್ತ, ಸಾರಿಗೆ ಬಸ್ ನಿಲ್ದಾಣ, ಪಿಕಾರ್ಡ್ ಬ್ಯಾಂಕ್ ಮುಂತಾದ ಸ್ಥಳಗಳಲ್ಲಿ ಪೊಲೀಸರ ಕೈಗೆ ಸಿಕ್ಕಿ ದಂಡ ತೆತ್ತರು.
ಪಟ್ಟಣ ಹಾಗೂ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿದ್ದರಿಂದ ಅಪಘಾತಗಳೂ ಹೆಚ್ಚುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ನಿಯಮ ಪಾಲನೆ ಜತೆಗೆ ಜೀವರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ತಿಳಿಸಿದ್ದಾರೆ.