ಜಿಲ್ಲಾದ್ಯಂತ ವಿಶ್ವ ಪರಿಸರ ದಿನಾಚರಣೆ

02
Published on

ಚಾಮರಾಜನಗರ : ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಳಕೆಯಿಂದಾಗುವ ದುಷ್ಪರಿಣಾಮದ ಅರಿವಿನ ಜತೆಗೆ ಗಿಡನೆಟ್ಟು ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಾರುವ ಮೂಲಕ ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಜಿಲ್ಲೆಯ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಇನ್ನಿತರ ಸಂಘ- ಸಂಸ್ಥೆಗಳ ವತಿಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ವಿವಿಧ ಕಡೆಗಳಲ್ಲಿ ನಗರಸಭೆ ವತಿಯಿಂದ ಗಿಡಗಳನ್ನು ನೆಡುವ ಮೂಲಕ ವಿಭಿನ್ನವಾಗಿ ಪರಿಸರ ದಿನವನ್ನು ದಿನವಿಡೀ ಆಚರಿಸಲಾಯಿತು. ಅರಣ್ಯ ಇಲಾಖೆ, ಕೃಷಿ ಇಲಾಖೆ, ಕೃಷಿ ತಾಂತ್ರಿಕ ವಿಶ್ವ ವಿದ್ಯಾಲಯ ಹಾಗೂ ಇನ್ನಿತರ ಶಾಲಾ-ಕಾಲೇಜುಗಳ ಆವರಣದಲ್ಲಿ ಗಿಡಗಳನ್ನು ನೆಟ್ಟು, ನೀರು ಎರೆಯುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಮಣ್ಣಿನ ಸಂರಕ್ಷಣೆ ಅಗತ್ಯ:
ವಾತಾವರಣದಲ್ಲಿ ಉತ್ಪತ್ತಿಯಾಗುತ್ತಿರುವ ವಿಷಕಾರಿ ವಸ್ತುಗಳಿಂದ ಮಣ್ಣು ಸತ್ವವನ್ನು ಕಳೆದುಕೊಳ್ಳುತ್ತಿದ್ದು, ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ಹೇಳಿದರು.
ನಗರದ ಕರಿವರದರಾಯ ಬೆಟ್ಟದಲ್ಲಿ ಅರಣ್ಯ ಇಲಾಖೆ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಪರಿಸರ ದಿನ ಆಚರಣೆಗೊಳ್ಳುತ್ತದೆ. ಈ ಬಾರಿಯ ವಿಶ್ವ ಪರಿಸರ ದಿನವನ್ನು ನಮ್ಮ ಭೂಮಿ-ನಮ್ಮ ಭವಿಷ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಾತಾವರಣದಲ್ಲಿ ಹೆಚ್ಚುತ್ತಿರುವ ಬಿಸಿ, ನಿರಂತರ ವಾಯುಮಾಲಿನ್ಯ, ಜಲಮಾಲಿನ್ಯ, ಭೂ ಮಾಲಿನ್ಯ ಎಲ್ಲದಕ್ಕೂ ಬೆಲೆ ಕಟ್ಟುವ ಕಾಲ ಬಹಳ ದೂರವಿಲ್ಲ. ಇರುವ ಒಂದೇ ಒಂದು ಭೂ ಗ್ರಹವನ್ನು ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅಗತ್ಯವಾಗಿದೆ ಎಂದರು. ವಲಯ ಅರಣ್ಯಾಧಿಕಾರಿ ಉಮೇಶ್, ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಸಂಘಟಕ ಕೆ.ಪಿ.ಅಶೋಕ್‌ಕುಮಾರ್, ಜೆ.ಶ್ರೀನಿಧಿ, ಅರಣ್ಯ ಸಿಬ್ಬಂದಿ ಹಾಜರಿದ್ದರು.

ಸಾಲುಗಿಡಗಳನ್ನು ನೆಡುವ ಕಾರ್ಯಕ್ರಮ:
ಮಕ್ಕಳ ಸ್ನೇಹಿ ನ್ಯಾಯಾಲಯ ಮತ್ತು ಸತ್ರ ನ್ಯಾಯಾಧೀಶ ಎಚ್.ಜೆ.ಕೃಷ್ಣ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ಹೊಂದಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ನಗರದ ಕರಿನಂಜನಪುರ ಸಮೀಪದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಮುಂಭಾಗ ರಸ್ತೆಗೆ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ತುಂಬ ಹೆಚ್ಚಾಗಿದ್ದು ಉಷ್ಣಾಂಶವನ್ನು ಕಡಿಮೆ ಮಾಡಬೇಕಾದರೆ ಹೆಚ್ಚು ಗಿಡ, ಮರಗಳನ್ನು ಸಂರಕ್ಷಣೆ ಮಾಡಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿ, ಜಿಲ್ಲೆಯ ಸುತ್ತಮುತ್ತ 12,000ಕ್ಕೂ ಹೆಚ್ಚು ಗಿಡಗಳನ್ನು ನಮ್ಮ ಟ್ರಸ್ಟ್ ವತಿಯಿಂದ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಪರಸರ ಸಂರಕ್ಷಣೆ ಕಾರ್ಯವು ನಿತ್ಯ ನಿರಂತರವಾಗಿ ಕಳೆದ 8 ವರ್ಷಗಳಿಂದ ಸಾಗಿದೆ ಎಂದರು. ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ವಿಸ್ತರಣಾಧಿಕಾರಿ ಲಿಂಗರಾಜು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಶಿಲ್ಪಾ, ಶಾಲಿನಿ, ವಿದ್ಯಾರ್ಥಿನಿಯರು ಹಾಜರಿದ್ದರು.

ಶ್ರೀರಾಮಚಂದ್ರವಿದ್ಯಾ ಸಂಸ್ಥೆಯಲ್ಲಿ ಪರಿಸರ ದಿನ:ಪರಿಸರದ ರಕ್ಷಣೆಯಿಂದ ಸುತ್ತಮುತ್ತಲಿನ ವಾತಾವರಣ ಶುದ್ಧವಾಗುತ್ತದೆ ಎಂದು ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಎಸ್.ಮಾದಯ್ಯ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿ ಇರುವ ಶ್ರೀರಾಮಚಂದ್ರ ವಿದ್ಯಾಸಂಸ್ಥೆಯ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯು ಹಸಿರಿನಿಂದ ಕೂಡಿದೆ. ಹಸಿರು ಆರೋಗ್ಯದ ಸಂಕೇತ ಹಸಿರನ್ನು ಉಳಿಸಿಕೊಳ್ಳುವ ಹೊಣೆ ಪ್ರತಿಯೊಬ್ಬರದ್ದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪರಸರದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಎಂ.ರುದ್ರಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಕರು ತಿಳಿಸುವ ಪಠ್ಯಗಳನ್ನು ಕಲಿತು ವಿದ್ಯಾವಂತರಾಗಬೇಕು. ಜತೆಗೆ ಶಾಲೆಯ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಒಂದು ಗಿಡವನ್ನು ದತ್ತು ತೆಗೆದು ಅದನ್ನು ಪೋಷಣೆ ಮಾಡಬೇಕು. ಮುಂದಿನ ದಿನಗಳಲ್ಲಿ ನೀವು ಬೆಳೆಸಿದ ಗಿಡ ಮರವಾಗಿ ನಿಮ್ಮ ಹೆಸರು ಹೇಳುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ರತ್ನಮ್ಮ, ಕುಮಾರ್, ದೈಹಿಕ ಶಿಕ್ಷಣ ಶಿಕ್ಷಕ ರಂಗಸ್ವಾಮಿ, ಮಹೇಶ್, ನಾಗರಾಜು, ಡಿ.ಎಸ್.ಯಶಪಾಲ್ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

ಕೃಷಿ ವಿಜ್ಞಾನ ಕೇಂದ್ರದಲ್ಲೂ ಆಚರಣೆ:
ತಾಲೂಕಿನ ಹರದನಹಳ್ಳಿ ಸಮೀಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನವನ್ನು ಭೂ ಪುನಶ್ಚೇತನ, ಅರಣ್ಯೀಕರಣ ಮತ್ತು ಬರ ಸಹಿಷ್ಣುತೆ ಘೋಷವಾಕ್ಯದೊಂದಿಗೆ ಆಚರಿಸಲಾಯಿತು.
ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ ಮಾತನಾಡಿ, ವರ್ತಮಾನದಲ್ಲಿ ಹವಾಮಾನ ವೈಪರೀತ್ಯ ಹೆಚ್ಚುತ್ತಿದ್ದು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸದ್ಬಳಕೆ ಮಾಡಬೇಕು. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಸಸ್ಯ ಸಂಕುಲದ ಬೆಳವಣಿಗೆ ಮತ್ತು ನಿರ್ವಹಣೆ ಆಗಿದ್ದು, ಇದಕ್ಕೆ ಆದ್ಯತೆ ನೀಡಬೇಕಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಬೆಳೆ ಉತ್ಪಾದನೆಯಲ್ಲಿ ಏರುಪೇರು ಮತ್ತು ಮಾನವ ಆರೋಗ್ಯ ಅಸಮತೋಲನವಾಗಿದ್ದು, ಈ ನಿಟ್ಟಿನಲ್ಲಿ ಸೂಕ್ತ ಸಂರಕ್ಷಣೆ ಮತ್ತು ನಿರ್ವಹಣಾ ಕ್ರಮಗಳನ್ನು ವೈಜ್ಞಾನಿಕ ಶಿಫಾರಸಿನ ಮೇರೆಗೆ ಅನುಸರಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ, ಪ್ರಗತಿಪರ ಸಮಗ್ರ ಕೃಷಿಕ ಮಂಜುನಾಥ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಚಂದ್ರಶೇಖರ್ ಎಸ್.ಕಳ್ಳೀಮನಿ, ಡಾ.ಮೋಹನ್‌ಕುಮಾರ್, ಡಾ.ಜೆ.ದೀಪಾ, ಡಾ.ಬಿ.ಪಂಪನಗೌಡ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net