ಸಮಯಪ್ರಜ್ಞೆ ರೂಢಿಸಿಕೊಂಡರೆ ಸಾಧನೆ ಸುಲಭ

10raju3
Published on

ಚಾಮರಾಜನಗರ: ವಿದ್ಯಾರ್ಥಿಗಳು ಸಮಯಪ್ರಜ್ಞೆ ರೂಢಿಸಿಕೊಂಡರೆ ಸಾಧನೆ ಸುಲಭವಾಗುತ್ತದೆ ಎಂದು ಜೆಎಸ್‌ಎಸ್ ಪದವಿ ಪೂರ್ವ ಮಹಿಳಾ ಕಾಲೇಜು ಪ್ರಾಂಶುಪಾಲ ದೇವರಾಜಮೂರ್ತಿ ಸಲಹೆ ನೀಡಿದರು.

ನಗರದ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 2023-24ನೇ ಸಾಲಿನ ಸಾಂಸ್ಕೃತಿಕ ವೇದಿಕೆ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಪಾಠಗಳನ್ನು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡರೆ, ಅದು ಉನ್ನತ ಶಿಕ್ಷಣದವರೆಗೂ ಸಹಕಾರಿಯಾಗುತ್ತದೆ. ಹಣ, ಆಸ್ತಿ ಬೇಕಾದರೆ ಕಳ್ಳತನ ಮಾಡಬಹುದು. ಆದರೆ ವಿದ್ಯೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಶಾಲಾ, ಕಾಲೇಜುಗಳಲ್ಲಿ ಗುರುಗಳು ಮತ್ತು ಮನೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ಸಾಗಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನ ಸಂಪಾದಿಸಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2023-24 ನೇ ಸಾಲಿನ ಸಾಂಸ್ಕೃತಿಕ ವಿದ್ಯಾರ್ಥಿ ವೇದಿಕೆ ಅಧ್ಯಕ್ಷೆಯಾಗಿ ಸೈಯದಾ ಉಮ್ಮೆ ಅಫ್ಸಾ,
ಕಾರ್ಯದರ್ಶಿಯಾಗಿ ಹಿಬಾ, ಕ್ರೀಡಾ ಕಾರ್ಯದರ್ಶಿಯಾಗಿ ಪೂಜಾ ಆಯ್ಕೆಯಾದರು. ಉಪನ್ಯಾಸಕ ಹಾಗೂ ಸಾಂಸ್ಕೃತಿಕ ಸಮಿತಿ ಸಂಚಾಲಕ ಎಚ್.ಎಸ್.ವೀರೇಶ್, ಉಪನ್ಯಾಸಕರಾದ ಮಹದೇವಸ್ವಾಮಿ, ಅಂಬಿಕಾದೇವಿ, ಸಿ.ಗಿರೀಶ್, ರಮ್ಯಾ, ವಿನುತಾ, ದೈಹಿಕ ಶಿಕ್ಷಣ ನಿರ್ದೇಶಕ ರವಿಕುಮಾರ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net