

ಚಾಮರಾಜನಗರ : ಸರ್ಕಾರಿ ಶಾಲಾ, ಕಾಲೇಜಿನಲ್ಲಿ ಮೌಲ್ಯಯುತ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಾಂಸ್ಕೃತಿಕ ಸಮಾರೋಪ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ಈ ನಿಟ್ಟಿನಲ್ಲಿ ತಾಲೂಕಿನ ಭೋಗಾಪುರದಲ್ಲಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ವಸತಿಯುಕ್ತ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸ್ಥಾಪನೆಗೊಂಡಿದೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಮತ್ತು ಬಿಕಾಂ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಮೂಲಕ ಕಾಲೇಜಿನಲ್ಲಿರುವ ಸುಸಜ್ಜಿತ ಅನೂಕೂಲಗಳನ್ನು ಬಳಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಎ.ಆರ್.ಸುಷ್ಮಾ ಮಾತನಾಡಿ, ಸತ್ಯ, ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳಂತಹ ಸದ್ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಸಮಾಜದ ಪರ ಕಾಳಜಿ ಮತ್ತು ಗುರುಗಳೊಡನೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಭವ್ಯ ಭಾರತದ ನಿರ್ಮಾತೃಗಳಾಗಬೇಕು ಎಂದರು.
ಸಂವಿಧಾನ ತಜ್ಞ ಡಾ.ಪಿ. ದೇವರಾಜು ಮಾತನಾಡಿ, ತಾಲೂಕಿನ ಭೋಗಾಪುರದಲ್ಲಿ ನಿರ್ಮಾಣಗೊಂಡಿರುವ ವಸತಿ ಪ್ರಥಮದರ್ಜೆ ಕಾಲೇಜು ಶೈಕ್ಷಣಿಕ ಅಭ್ಯುದಯಕ್ಕೆ ಪೂರಕವಾದ ಎಲ್ಲ ಅಗತ್ಯ ಸೌಲಭ್ಯಗನ್ನು ಹೊಂದಿದೆ. ಅದರಲ್ಲಿ ಉತ್ತಮ ಗ್ರಂಥಾಲಯ, ಇಂಟರ್‌ನೆಟ್ ಸೌಲಭ್ಯ, ಐಸಿಟಿ ಉಪಕರಣ ಸೌಲಭ್ಯವಿದೆ. ಪಿಯುಸಿ ಪಾಸಾದ ಎಲ್ಲಾ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಪ್ರವೇಶಾತಿ ಪಡೆದುಕೊಳ್ಳುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಕಾಲೇಜಿನಲ್ಲಿ ವಿಶೇಷವಾಗಿ ಶೇ.60 ರಷ್ಠು ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರವೇಶ ಇರುತ್ತದೆ. ಶೇ.40 ಭಾಗ ಇತರ ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶ ಇರುತ್ತದೆ ಇದನ್ನು ಸದುಪಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ದೀಪಕ್‌ವಿಲ್ಸನ್, ಸುದರ್ಶನ್, ಡಾ.ಮಹೇಶ್‌ಬಾಬು, ಮಹದೇವಸ್ವಾಮಿ, ವ್ಯವಸ್ಥಾಪಕ ಪೂರ್ಣಿಮಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.