ಅದ್ಧೂರಿ ಬಸವ ಜಯಂತೋತ್ಸವ

06rajesh4
Published on

ಚಾಮರಾಜನಗರ: ಶ್ರೀಸಿದ್ಧಮಲ್ಲೇಶ್ವರ ವಿರಕ್ತ ಮಠದ ವತಿಯಿಂದ ಗುರುವಾರ ಆಯೋಜಿಸಿದ್ದ ಗ್ರಾಮಾಂತರ ಬಸವ ಜಯಂತ್ಯುತ್ಸವ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯಿತು.

ನಗರದ ಶ್ರೀವಿರಕ್ತ ಮಠದ ಆವರಣದಲ್ಲಿ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಭಕ್ತ ವೃಂದದ ವತಿಯಿಂದ ಆಯೋಜಿಸಲಾಗಿದ್ದ ಪೂಜ್ಯಧ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮ ಹಾಗೂ ಗ್ರಾಮಾಂತರ ಬಸವ ಜಯಂತೋತ್ಸವದ ಮೆರವಣಿಗೆ ಕಾರ್ಯಕ್ರಮಕ್ಕೆ ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತಸ್ವಾಮೀಜಿ, ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಅಲಂಕೃತ ರಥದಲ್ಲಿ ಅಳವಡಿಸಿದ್ದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಶ್ರೀವಿರಕ್ತ ಮಠದ ಮುಂಭಾಗದಿಂದ ಸಾಗಿದ ಮೆರವಣಿಗೆ ಬಿ.ರಾಚಯ್ಯ ಜೋಡಿರಸ್ತೆ, ಶ್ರೀಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಶ್ರೀಭುವನೇಶ್ವರಿ ವೃತ್ತ ಹಾಗೂ ಜೋಡಿರಸ್ತೆ ಮಾರ್ಗವಾಗಿ ಸಾಗಿ ಶ್ರೀಮಠದಲ್ಲಿ ಅಂತ್ಯವಾಯಿತು. ಶ್ರೀಬಸವೇಶ್ವರರ ಭಾವಚಿತ್ರದ ಮೆರವಣಿಗೆ ಜಾನಪದ ಕಲಾ ತಂಡಗಳ ವೈಭವದೊಂದಿಗೆ ವಿಜೃಂಭಣೆಯಿಂದ ಜರುಗಿತು. ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಬಂದ ಸಾವಿರಾರು ಸಂಖ್ಯೆಯ ವೀರಶೈವ ಲಿಂಗಾಯತರು, ಬಸವ ಅನುಯಾಯಿಗಳು ಮೆರವಣಿಗೆಯಲ್ಲಿ ಹಾಗೂ ಮಠದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ವೈಭವದ ಭಾವಚಿತ್ರ ಮೆರವಣಿಗೆ:
ಗ್ರಾಮಾಂತರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಶ್ರೀಬಸವೇಶ್ವರರ ಭಾವಚಿತ್ರ ಮೆರವಣಿಗೆಯಲ್ಲಿ ವೀರಗಾಸೆ, ಗೊರವರ ಕುಣಿತ, ಕಂಸಾಲೆ, ಗೊಂಬೆ ಕುಣಿತ, ಡೊಳ್ಳುಕುಣಿತ, ನಗಾರಿ, ತಮಟೆ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯ ವೈಭವವನ್ನು ಹೆಚ್ಚಿಸಿದರು. ಮೆರವಣಿಗೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಂದಿಧ್ವಜ ಕುಣಿತ ಭಾವಚಿತ್ರ ಮೆರವಣಿಗೆಗೆ ಮತ್ತಷ್ಟು ಮೆರುಗು ತುಂಬಿತು. ತಾಲೂಕಿನ ರೇಚಂಬಳ್ಳಿ, ಕುಲಗಾಣ, ಕಾಳನಹುಂಡಿ, ಹೆಗ್ಗೋಠಾರ, ಗೌಡಹಳ್ಳಿ, ಕುಮಚಹಳ್ಳಿ , ಪುಟ್ಟನಪುರ, ಮರಿಯಾಲ ಹಾಗೂ ಇನ್ನಿತರೆ ಗ್ರಾಮಗಳಿಂದ ತಂದಿದ್ದ ನಂದಿಧ್ವಜಗಳನ್ನು ನೂರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಒತ್ತು ಕುಣಿದರು. ಅದಲ್ಲದೇ ಹರದನಹಳ್ಳಿ, ಜ್ಯೋತಿಗೌಡನಪುರ, ಆಲೂರು, ಕುಮಚಹಳ್ಳಿ, ಮಾದಾಪುರ, ರೇಚಂಬಳ್ಳಿ, ವಿ.ಸಿ.ಹೊಸೂರು, ಬಂದಿಗೌಡನಹಳ್ಳಿ, ಬಿ.ಜಿ.ಕಾಲೋನಿ, ಪುಟ್ಟನಪುರ, ಮರಿಯಾಲ, ಹೆಗ್ಗೋಠಾರ, ಕಾಳನಹುಂಡಿ, ಕಾಡಹಳ್ಳಿ ಗ್ರಾಮದ ಬಸವ ಬಳಗದವರು ತಂದಿದ್ದ ವಿವಿಧ ಅಲಂಕೃತ ಬಸವೇಶ್ವರರ ಭಾವಚಿತ್ರಗಳು ಮೆರವಣಿಗೆಯಲ್ಲಿ ಗಮನಸೆಳೆದವು. ಧ್ವನಿವರ್ದಕದ ಸದ್ದಿಗೆ ರಸ್ತೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಶ್ರೀ ಸಿದ್ದಗಂಗಸ್ವಾಮಿಜಿ ಹಾಗೂ ಬಸವೇಶ್ವರರು ಇದ್ದ ಕೇಸರಿ ಬಾವುಟಗಳನ್ನು ಹಿಡಿದು ಸಂಭ್ರಮಿಸಿದರು.

ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮ:
ಶ್ರೀಬಸವೇಶ್ವರ ಜಯಂತೋತ್ಸವದ ಅಂಗವಾಗಿ ಹಾಸನ ಜಿಲ್ಲೆಯ ಮಲ್ಲಿಕಾರ್ಜುನ ಬೆಟ್ಟ, ಬೇಲೂರು ಮಠದ ಶ್ರೀಮಹಾಂತ ಬಸವಲಿಂಗಸ್ವಾಮೀಜಿ ಮಧ್ಯಾಹ್ನ 12 ಗಂಟೆಗೆ ನೆರೆದಿದ್ದ ಭಕ್ತರಿಗೆ ಪ್ರವಚನ ನೀಡಿದರು. ಮಧ್ಯಾಹ್ನ 1 ಗಂಟೆಗೆ ತೊರವಳ್ಳಿಯ ಟಿ.ಸಿ.ಸೋಮಣ್ಣ ಮತ್ತು ತಂಡದಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದಲೂ ಹಲವು ಮಠಾಧೀಶರು ಜಯಂತೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ವಿವಿಧ ಪೂಜಾ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಜಯಂತೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಬಹಳ ಅಚ್ಚುಕಟ್ಟಿನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಭಕ್ತಾದಿಗಳಿಗೆ ಮಜ್ಜಿಗೆ ವಿತರಣೆ:
ಗ್ರಾಮಾಂತರ ಬಸವ ಜಯಂತೋತ್ಸವ ಹಾಗೂ ಪೂಜ್ಯದ್ವಯರ ಸಂಸ್ಮರಣೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಇಂಚರ ಗ್ರೂಪ್ಸ್ ಹಾಗೂ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ಮಜ್ಜಿಗೆ ವಿತರಿಸಲಾಯಿತು. ನಗರದ ಜೋಡಿರಸ್ತೆಯಲ್ಲಿರುವ ಇಂಚರ ಗ್ರೂಪ್ಸ್ ಶ್ರೀಸಾಯಿ ಹೋಟಲ್ ಮುಂಭಾಗದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಸ್ಟೈಲ್ ಮಂಜುನಾಥ್ ಅವರ ನೇತೃತ್ವದಲಿ ್ಲಮಜ್ಜಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆರ್.ಎನ್.ಸ್ವಾಮಿ, ಈಶ್ವರ್ ರಕ್ಷಿತ್, ಕೊತ್ತಲವಾಡಿ ಕುಮಾರ್, ರಾಧಾಕೃಷ್ಣ, ವಿಶ್ವ, ರವಿ, ಬಸಪ್ಪ, ನಾಗೇಂದ್ರ, ಬಸವರಾಜು ಪಾಪು, ಗುರುಸ್ವಾಮಿ, ಕಾವುದವಾಡಿ ಗುರು ಹಾಗೂ ಇಂಚರ ಗ್ರೂಪ್ ಸಿಬ್ಬಂದಿವರ್ಗ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net