ಜೈನಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ

Published on

ಚಾಮರಾಜನಗರ : ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡನೀಯವಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಾರ್ಶ್ವನಾಥ ಜೈನ ಸಂಘದ ಸದಸ್ಯ ಉಲ್ಲಾಸ್ ಆಗ್ರಹಿಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಅಹಿಂಸಾ ತತ್ವದ ಪರವಾಗಿದ್ದು, ಮಕ್ಕಳಿಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಮಾರ್ಗದರ್ಶನ ಮಾಡುತ್ತಿದ್ದರು. ಇವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜೈನಮುನಿಗಳ ಹತ್ಯೆ ಮೇಲ್ನೋಟಕ್ಕೆ ಸಾಲದ ಹಣ ಕೇಳಿದ್ದಕ್ಕೆ ಎಂದು ಹೇಳಲಾಗುತ್ತಿದೆ. ಮುನಿಗಳು ಆರ್ಥಿಕವಾಗಿ ಯಾರೊಂದಿಗೂ ವ್ಯವಹಾರ ನಡೆಸುವುದಿಲ್ಲ. ಇದರ ಹಿಂದೆ ಬೇರೆ ರೀತಿಯ ಕೈವಾಡವಿದೆ. ಇದು ಸಮಾಜವೇ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಜೈನ ಧರ್ಮದ ಎಲ್ಲ ಮುನಿಗಳಿಗೆ, ಪಾಶ್ವಚಾರ್ಯರಿಗೆ, ಸಾಧು-ಸಂತರಿಗೆ ಹಾಗೂ ಭಟ್ಟಾಚಾರ್ಯರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಅವರು ಸಂಚಾರ ಕೈಗೊಂಡ ವೇಳೆ ಬಿಗಿ ಬಂದೋಬಸ್ತ್ ಮಾಡಬೇಕು. ಈ ಘಟನೆ ಕುರಿತು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪಾರ್ಶ್ವನಾಥ ಜೈನ ಸಂಘದ ಅಧ್ಯಕ್ಷ ಎಂ.ಪಿ.ಸುನೀಲ್ಕುಮಾರ್, ಉಪಾಧ್ಯಕ್ಷ ಸಿ.ಬಿ.ನಾಗೇಂದ್ರಯ್ಯ, ಕಾರ್ಯದರ್ಶಿ ಸಿ.ಬಿ.ಮಾದೇಶ್‌ಕುಮಾರ್, ಸುರೇಶ್‌ಕುಮಾರ್ ಜೈನ್, ಬಿ.ಸತೀಶ್‌ಕುಮಾರ್, ಕನ್ನೇಗಾಲ್ ಜೈನ್, ಡಿ.ಪಿ.ಉಲ್ಲಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net