

ಚಾಮರಾಜನಗರ: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದು ಮುಂದುವರಿದಿದ್ದು, ಸೋಮವಾರ ಹಲವೆಡೆ ಭರ್ಜರಿ ಮಳೆಯಾಯಿತು.
ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಸಂತೇಮರಹಳ್ಳಿ, ಕೊಳ್ಳೇಗಾಲ ಹಾಗೂ ಇನ್ನಿತರೆ ಕಡೆಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಮಳೆ ಸುಮಾರು ಒಂದು ತಾಸಿಗಿಂತಲೂ ಹೆಚ್ಚು ಕಾಲ ಎಡಬಿಡದೇ ಸುರಿಯಿತು.ನಗರದಲ್ಲಿ ಬೆಳಿಗ್ಗೆಯಿಂದಲೇ ದಟ್ಟವಾದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಮಧ್ಯಾಹ್ನದ ವೇಳೆಗೆ ಭರ್ಜರಿಯಾಗಿ ಮಳೆ ಸುರಿಯಿತು.
ಪರಿಣಾಮವಾಗಿ ನಗರದ ದೊಡ್ಡಂಗಡಿ, ಚಿಕ್ಕಂಗಡಿಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಸಂಪಿಗೆ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ವಾಹನ ಚಾಲಕರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಪ್ರಮುಖ ರಸ್ತೆಗಳು ಹಾಗೂ ಚರಂಡಿಗಳು ನೀರಿನಿಂದ ಜಲಾವೃತವಾಗಿತ್ತು. ತಗ್ಗುಪ್ರದೇಶಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಯಿತು.
ಡಿಡೀರನೆ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಹಾಗೂ ಬೀದಿಬದಿಯ ವ್ಯಾಪಾರಿಗಳು ಕೆಲಕಾಲ ಕಿರಿಕಿರಿ ಅನುಭವಿಸಿದರು. ಜನರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಿಂದ ತಪ್ಪಿಸಿಕೊಳ್ಳಲು ಛತ್ರಿಗಳ ಮೊರೆ ಹೋದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಳೆನೀರು ತುಂಬಿಕೊಂಡು ಪ್ರಯಾಣಿಕರು ಓಡಾಡಲು ಸಮಸ್ಯೆ ಉಂಟಾಯಿತು. ಕಳೆದ ವಾರ ಎರಡು-ಮೂರು ದಿನ ಬಿಡುವು ನೀಡಿದ್ದ ಮಳೆರಾಯ ಮತ್ತೆ ತನ್ನ ನರ್ತನವನ್ನು ತೋರುತ್ತಿದ್ದು, ಭರ್ಜರಿಯಾಗಿ ಸುರಿಯುತ್ತಿರುವ ಮಳೆಗೆ ಕೆರೆ-ಕಟ್ಟೆಗಳು ಭರ್ತಿಯಾಗಿ, ಕಾಲುವೆಗಳಲ್ಲಿ ಮಳೆ ನೀರು ತುಂಬಿ ಹರಿಯಿತು.
ಬಿತ್ತನೆ ಕಾರ್ಯಕ್ಕೆ ತೊಂದರೆ:
ಕಳೆದ ವಾರದಿಂದ ಸತತವಾಗಿ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಯಿಂದಾಗಿ ರೈತರ ಬೆಳೆಗಳಿಗೆ ಸಾಕಷ್ಟು ಹಾನಿ ಉಂಟಾಗಿತ್ತು. ಮಳೆಯಾಶ್ರಿತ ಪ್ರದೇಶದ ರೈತರಲ್ಲಿ ನಿರಂತರ ಮಳೆ ಮಂದಹಾಸವನ್ನು ಉಂಟುಮಾಡಿತ್ತು. ಹಲವೆಡೆ ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿದ ರೈತರು ಜಮೀನನ್ನು ಉಳುಮೆಮಾಡಿ ಬಿತ್ತನೆಗೆ ಸಿದ್ಧ ಪಡಿಸಿಕೊಂಡಿದ್ದರು. ಚಾಮರಾಜನಗರ ಮತ್ತು ಗುಂಡ್ಲುಪೇಟೆ ಭಾಗದಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯಕ್ಕೆ ಭರ್ಜರಿಯಾಗಿ ಸುರಿದ ಮಳೆ ತೊಂದರೆಯನ್ನು ಉಂಟುಮಾಡಿತು. ಸಾಕಷ್ಟು ಕಡೆಗಳಲ್ಲಿ ನಿರಂತರ ಮಳೆಯಿಂದಾಗಿ ಜಮೀನು ಮತ್ತು ತೋಟಗಳು ಅಚ್ಚ ಹಸಿರಿನಿಂದ ಕೂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬಿರುಗಾಳಿ ಮಳೆಗೆ ಹಲವೆಡೆ ಹಾನಿ:
ಜಿಲ್ಲೆಯಲ್ಲಿ ಭಾನುವಾರದಿಂದ ಮತ್ತೆ ಶುರುವಾಗಿರುವ ಭಾರಿ ಮಳರಯಿಂದಾಗಿ ಹಲವೆಡೆ ಸಾಕಷ್ಟು ಹಾನಿಉಂಟಾಗಿದೆ. ಹಲವು ರೈತರ ಜಮೀನುಗಳಲ್ಲಿ ಮಳರನೀರು ನಿಂತು ಬೆಳೆಗಳಿಗೆ ಹಾನಿಯಾಗಿದೆ. ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿ ಸಮಸ್ಯೆ ಉಂಟಾಗಿದೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ್ನೂರು ಗ್ರಾಮದ ಶಿವಯ್ಯ ಎಂಬುವವರಿಗೆ ಸೇರಿದ ಆಲೆಮನೆಯ ಮೇಲ್ಛಾವಣಿ ಹಾರಿಹೋಗಿದೆ. ಕಬ್ಬುಬೆಳೆದು ಆಲೆಮನೆಯಲ್ಲಿ ಸಾವಯವ ಬೆಲ್ಲ ತಯಾರಿಸಿ ಜೀವನ ಸಾಗಿಸುತ್ತಿದ್ದ ರೈತನಿಗೆ ಇದರಿಂದಾಗಿ ಸಂಕಷ್ಟ ಎದುರಾಗಿದೆ. ಈ ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ರೈತನಿಗೆ ಸೂಕ್ತವಾದ ಪರಿಹಾರವನ್ನು ನೀಡಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.