ಪರಿಸರ ಸಂರಕ್ಷಣೆ ಮನೆಯಿಂದಲೇ ರೂಢಿಯಾಗಲಿ

03rajesh1 (1)
Published on

ಚಾಮರಾಜನಗರ: ಪರಿಸರ ನಾಶದಿಂದಾಗಿ ಪ್ರಸ್ತುತ ಹವಮಾನ ವೈಪರೀತ್ಯ ಉಂಟಾಗುತ್ತಿದ್ದು, ಪರಿಸರ ಸಂರಕ್ಷಣೆ ಮನೆಯಿಂದಲೇ ರೂಢಿಯಾಗಬೇಕು ಎಂದು ಸಮಾಜ ಸೇವಕ ಸುರೇಶ್‌ಗೌಡ ಸಲಹೆ ನೀಡಿದರು.

ನಗರದ ಭ್ರಮರಾಂಬ ಬಡಾವಣೆಯಲ್ಲಿರುವ ವಿಜಯವಾಣಿ ಪತ್ರಿಕೆ ಜಿಲ್ಲಾ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸೋಮವಾರ ಆಯೋಜಿಸಿದ್ದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಿ ಮಾತನಾಡಿದರು.

ಹವಾಮಾನ ವೈಪರೀತ್ಯದಿಂದ ಸೂಕ್ತ ಸಮಯಕ್ಕೆ ಮಳೆ ಬರುತ್ತಿಲ್ಲ. ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಮನುಷ್ಯ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾನೆ. ಈ ಹಿಂದೆ ಕಾಣಿಸಿಕೊಂಡಿದ್ದ ಕೋವಿಡ್ ಸೋಂಕು ಕೂಡ ಮನುಷ್ಯನ ದುರಾಸೆಯಿಂದ ಆಗಿರುವ ಅನಾಹುತವಾಗಿದೆ. ಇದಕ್ಕೆಲ್ಲವೂ ಪರಿಸರ ನಾಶವೇ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಮಕ್ಕಳು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಗಿಡಗಳನ್ನು ನೆಡುವುದು, ನಿತ್ಯವೂ ನೀರು ಹಾಕಿ ಪೋಷಣೆ ಮಾಡುವುದು ವಿದ್ಯಾರ್ಥಿಗಳಿಗೆ ಹವ್ಯಾಸವಾಗಬೇಕು. ಮನೆಯಿಂದಲೇ ಎಲ್ಲವನ್ನೂ ರೂಢಿಸಿಕೊಳ್ಳಬೇಕು. ಹಸರೇ ಉಸಿರು ಎಂದು ಬರಿ ಮಾತಿನಲ್ಲಿ ಹೇಳಿದರೆ ಸಾಲದು. ಬದಲಾಗಿ ಕಾಡು ಹಾಗೂ ವನ್ಯಜೀವಿಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ನಿರಂತರವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳಿಗೆ ನಾವು ಎಂದಿಗೂ ಸಹಕಾರ ನೀಡುತ್ತಲೇ ಇರುತ್ತೇವೆ ಎಂದರು.

ನಾಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಜಯವಾಣಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಉತ್ತಮವಾಗಿದೆ. ಮಕ್ಕಳು ಕೇವಲ ಚಿತ್ರಗಳನ್ನು ಬಿಡಿಸಿ, ಬಹುಮಾನ ಪಡೆಯುವುದೇ ಅಲ್ಲದೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಾಮರಾಜನಗರ ಹೆಚ್ಚಿನ ಅರಣ್ಯ ಮತ್ತು ವನ್ಯ ಸಂಪತ್ತನ್ನು ಒಳಗೊಂಡಿದೆ. ಅದನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಅರಣ್ಯ ಮತ್ತು ವನ್ಯಜೀವಿಗಳು ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯವಾಗುತ್ತದೆ. ಅತಿಯಾದ ಪ್ಲಾಸ್ಟಿಕ್ ಮತ್ತು ರಾಸಾಯನಿಕಗಳ ಬಳಕೆಯಿಂದಾಗಿ ಪರಿಸರ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ಅವುಗಳ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟುಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಶಾಲೆಯ ಚಿತ್ರಕಲಾ ಶಿಕ್ಷಕ ರಾಜೇಶ್, ಪಾಲಕರಾದ ಸುರೇಶ್, ಸಮಾಜ ಸೇವಕಿ ನಾಗು ರಮೇಶ್, ಜೆಎಸ್‌ಎಸ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ಚೇತನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಹುಮಾನ ಪಡೆದ ವಿದ್ಯಾರ್ಥಿಗಳು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿಶ್ವ ಹಿಂದು ಪರಿಷತ್ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರೀತಮ್ ಸೂರಿ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಜೆಎಸ್‌ಎಸ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಎ.ಪಿ.ಉಲ್ಲಾಸ್, ಎಂ.ಸಿ.ಎಸ್. ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕೆ.ಜೆ.ಮಿಂಚಿತಾ ತೃತೀಯ ಸ್ಥಾನ ಪಡೆದುಕೊಂಡರು. ಯೂನಿವರ್ಸಲ್ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ ಆರ್.ಇಶಾನಿ ಮತ್ತು ಜೆಎಸ್‌ಎಸ್ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಎಂ.ಶಮಿತಾ ಸಮಾಧಾನಕರ ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ಜೆಎಸ್‌ಎಸ್ ಪಬ್ಲಿಕ್ ಶಾಲೆ, ಯೂನಿವರ್ಸ್ ಇಂಗ್ಲಿಷ್ ಶಾಲೆ, ಎಂಸಿಎಸ್ ಇಂಗ್ಲಿಷ್ ಶಾಲೆ, ವಿಎಚ್‌ಪಿ ಪ್ರೌಢಶಾಲೆ ಹಾಗೂ ಬಂಜಾರ ಪ್ರೌಢಶಾಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ. ಇಂತಹ ಜನಪರವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ವಿಜಯವಾಣಿ ಪತ್ರಿಕೆ ಜತೆಗೆ ನಾವು ಸದಾ ಜತೆಯಾಗಿರುತ್ತೇವೆ.ಸುರೇಶ್‌ಗೌಡ, ಸಮಾಜ ಸೇವಕ, ಚಾಮರಾಜನಗರ ಕಾಡು ನಾಶವಾದರೆ ವನ್ಯಜೀವಿಗಳು ನಾಶವಾದಂತೆ. ಅವು ನಾಶವಾದರೆ ಪರಿಸರ ಸಮತೋಲನ ಕಳೆದುಕೊಳ್ಳುತ್ತದೆ ಎನ್ನುವ ಧ್ಯೇಯವನ್ನು ಇಟ್ಟುಕೊಂಡು ಚಿತ್ರ ರಚಿಸಿದೆ. ವಿಜಯವಾಣಿಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸಂತಸವನ್ನುಂಟು ಮಾಡಿದೆ.ಪ್ರೀತಮ್ ಸೂರಿ, ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ, ವಿಎಚ್‌ಪಿ ಪ್ರೌಢಶಾಲೆ, ಚಾಮರಾಜನಗರ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಜಯವಾಣಿ ಪತ್ರಿಕೆ ಆಯೋಜನೆಯ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದೇ ಒಂದು ಹೆಮ್ಮೆ ಅನಿಸುತ್ತದೆ. ಅದರಲ್ಲೂ ದ್ವಿತೀಯ ಸ್ಥಾನ ಪಡೆದಿರುವುದು ಖುಷಿಯಾಗಿದೆ.ಎ.ಪಿ.ಉಲ್ಲಾಸ್, ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿ, ಜೆಎಸ್‌ಎಸ್ ಪಬ್ಲಿಕ್ ಶಾಲೆ, ಚಾಮರಾಜನಗರ ಸಾಕಷ್ಟು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ವಿಜಯವಾಣಿ ಪತ್ರಿಕೆ ಆಯೋಜನೆ ಮಾಡಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ ಪ್ರಶಸ್ತಿ ಪಡೆಯುತ್ತಿರುವುದೇ ಖುಷಿಯಾಗಿದೆ. ಇದು ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೆಚ್ಚಿಸಿದೆ.ಕೆ.ಜೆ.ಮಿಂಚಿತಾ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ, ಎಂಸಿಎಸ್ ಪ್ರೌಢಶಾಲೆ, ಸೋಮವಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net