

ಹನೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಜಯಗಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮುಖಂಡ ಸೆಲ್ವಕುಮಾರ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಾ.ನಗರದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಹಾಗೆಯೇ ಸಚಿವ ಎಚ್.ಸಿ ಮಹದೇವಪ್ಪ ಅವರಿಗೆ ಕ್ಷೇತ್ರದ ಬಗ್ಗೆ ಒಲವಿದ್ದು, ಅಭಿವೃದ್ಧಿಗೆ ಈವೆರಗೂ ಸಹಕಾರ ನೀಡುತ್ತಾ ಬಂದಿದ್ದಾರೆ. ಇದೀಗ ಇವರ ಪುತ್ರ ಸುನೀಲ್ ಬೋಸ್ ಅವರು 1.85 ಲಕ್ಷಕ್ಕೂ ಹೆಚ್ಚಿನ ಮತದ ಅಂತರದಿಂದ ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಇದರಲ್ಲಿ ಉಳಿದೆಲ್ಲಾ ಕ್ಷೇತ್ರಗಳಿಗಿಂತಲೂ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಅಂತರದ ಮತಗಳು ಲಭಿಸಿರುವುದು ಹನೂರು ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಿದೆ. ಇದರಿಂದ ಖುಷಿ ಕೊಟ್ಟಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪ್ರಕಾಶ್, ಪುಟ್ಟಪ್ಪ, ಶಿವಣ್ಣ ತಂಬಡಿ, ರಾಮಣ್ಣ, ರಾಜು, ರಮೇಶ್, ಕುಮಾರ್, ಗೋವಿಂದರಾಜು, ಮಹೇಶ್, ಶಿವಣ್ಣ ಹಾಗೂ ಇನ್ನಿತರರು ಇದ್ದರು.