ತಂಬಾಕಿನ ದುಷ್ಪರಿಣಾಮದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ

01rajesh2
Published on

ಚಾಮರಾಜನಗರ: ತಂಬಾಕು ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ ಹೇಳಿದರು.

ನಗರದ ಶ್ರೀಚಾಮರಾಜೇಶ್ವರ ದೇವಾಲಯದ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಂಬಾಕು ಸೇವನೆ ಹಾಗೂ ಮದ್ಯಪಾನ ಇನ್ನಿತರ ದುಶ್ಚಟದಿಂದ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಸಾರ್ವಜನಕರು ದುಶ್ಚಟಗಳಿಂದ ಹೊರಬಂದು ಕುಟುಂಬದ ಪೋಷಣೆ ಕಡೆ ಗಮನಹರಿಸಿ ಉತ್ತಮ ಜೀವನ ನಡೆಸುವಂತೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೆದ ಮಾತನಾಡಿ, ವಿಶ್ವಸಂಸ್ಥೆ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು 1988 ಮೇ.31 ರಂದು ಮೊದಲ ಬಾರಿಗೆ ಆಚರಣೆಗೆ ತಂದಿತು. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು. ಮದ್ಯ ವಯಸ್ಕರಿಗೆ ಸೀಮಿತವಾಗಿದ್ದ ತಂಬಾಕು ಸೇವನೆಯಿಂದ ಪ್ರಸ್ತುತ ದಿನಗಳಲ್ಲಿ 13-14 ವರ್ಷದ ಮಕ್ಕಳು ಕೂಡ ಈ ಚಟಕ್ಕೆ ಒಳಗಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಮಕ್ಕಳು ಬೇಗನೆ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಶಾಲೆ ಕಾಲೇಜಿನ ಮಕ್ಕಳಿಗೂ ಇದರ ಬಗ್ಗೆ ಅರಿವು ಮೂಡಿಸುವುದು ಉತ್ತಮ. ಈ ವರ್ಷದ ಘೋಷವಾಕ್ಯ ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಎಂಬುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚಿದಂಬರ ಮಾತನಾಡಿ, ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಮತ್ತೆಮತ್ತೆ ತಂಬಾಕು ಬಳಸಲು ಜನರನ್ನು ಪ್ರೇರೆಪಿಸಲಿದೆ. ಪುರುಷರಲ್ಲಿ ತಂಬಾಕು ಸೇವನೆ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಹ ತಂಬಾಕು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಎ.ಕೃಷ್ಣ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ರಾಜೇಶ್‌ಕುಮಾರ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಂಜುನಾಥ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ. ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜು, ತಂಬಾಕು ಸಲಹೆಗಾರ ಪ್ರಶಾಂತ್, ಸರ್ಕಾರಿ ನಸಿರ್ಂಗ್ ಶಾಲೆಯ ಬೋಧಕ ಗಂಗಮ್ಮ, ನಸಿರ್ಂಗ್ ಶಾಲೆಯ ವಿದ್ಯಾರ್ಥಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net