

ಚಾಮರಾಜನಗರ: ಈ ಬಾರಿಯಾದರೂ ಜನರು ಕೈಹಿಡಿಯುತ್ತಾರೆಯೇ ಎಂಬ ವಿಶ್ವಾಸದಲ್ಲಿದ್ದ ಬಾಲರಾಜ್ ಅವರ ಪಾಲಿನ ವನವಾಸ ಅಂತ್ಯವಾಗಲೇ ಇಲ್ಲ.
ಮೊದಲು ಕಾಂಗ್ರೆಸ್‌ನಲ್ಲೇ ತಮ್ಮ ರಾಜಕಾರಣವನ್ನು ಆರಂಭಿಸಿದ ಎಸ್.ಬಾಲರಾಜ್ ನಂತರ ಅವರ ಗುರುಗಳಾದ ದಿ.ರಾಜಶೇಖರ್ ಮೂರ್ತಿ ಅವರ ಜತೆಗೂಡಿ ಬಿಜೆಪಿಗೆ ಸೇರ್ಪಡೆಯಾದರು. 1999 ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ 2004 ರಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಬಳಿಕ ಆಪ್ತ ಸ್ನೇಹಿತ ಆರ್.ಧ್ರುವನಾರಾಯಣ್ ಅವರ ಆಹ್ವಾನದಂತೆ ಮರಳಿ ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ ಪಕ್ಷದಲ್ಲೂ ಸೂಕ್ತ ರೀತಿಯ ಅವಕಾಶ ನೀಡಲಿಲ್ಲ. 2023ರ ಕೊಳ್ಳೇಗಾಲ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದ ಕಾರಣದಿಂದ ಬೇಸತ್ತು ಮತ್ತೆ ಬಿಜೆಪಿ ಸೇರಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸತ್ವ ಪರೀಕ್ಷೆಗೆ ಧುಮುಕಿದರು.
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರ ವಿರುದ್ಧ 1,88,706 ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ.
ಈ ಮೂಲಕ ಚಾ.ನಗರ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಕಂಡಿದ್ದಾರೆ. ಸತತ ಮೂರು ದಶಕಗಳಿಂದ ರಾಜಕೀಯ ವನವಾಸ ಅನುಭವಿಸುತ್ತಿದ್ದ ಎಸ್.ಬಾಲರಾಜ್ ವನವಾಸ ಮುಂದುವರೆದಿದೆ.