ಜೂ.6 ರಂದು ಗ್ರಾಮಾಂತರ ಬಸವ ಜಯಂತೋತ್ಸವ

Published on

ಚಾಮರಾಜನಗರ : ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಭಕ್ತ ವೃಂದದ ವತಿಯಿಂದ ಜೂ.6 ರಂದು ಗ್ರಾಮಾಂತರ ಬಸವ ಜಯಂತೋತ್ಸವ ಹಾಗೂ ಪೂಜ್ಯಧ್ವಯರ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಪೀಠಾಧ್ಯಕ್ಷ ಶ್ರೀಚನ್ನಬಸವಸ್ವಾಮೀಜಿ ಹೇಳಿದರು.

ನಗರದ ಶ್ರೀ ವಿರಕ್ತಮಠದ ಆವರಣದಲ್ಲಿ ಜಯಂತೋತ್ಸವದ ಅಂಗವಾಗಿ ಜೂ.5 ರಿಂದಲೇ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅಂದು ಬೆಳಿಗ್ಗೆ 5 ಗಂಟೆಗೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಜರುಗುವುದು. ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ ನೆರವೇರಿಸಲಾಗುತ್ತದೆ. ಬೆಳಿಗ್ಗೆ 7 ಗಂಟೆಗೆ ಇಷ್ಟಲಿಂಗಪೂಜೆ ಹಾಗೂ 11 ಗಂಟೆಗೆ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬಳಿಕ ನಿರಂತರವಾಗಿ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 8 ಗಂಟೆಗೆ ಶ್ರೀಸಿದ್ದಮಲ್ಲೇಶ್ವರ ಕಲಾ ತಂಡದಿಂದ ‘ಪ್ರಭುಲಿಂಗಲೀಲೆ’ ಎಂಬ ನಾಟಕವನ್ನು ಆಯೋಜಿಸಲಾಗಿದೆ ಎಂದು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜೂ.6 ರಂದು ಬೆಳಿಗ್ಗೆ 10 ಗಂಟೆಗೆ ಗ್ರಾಮಾಂತರ ಬಸವ ಜಯಂತೋತ್ಸವ ಚಾಲನೆ ದೊರೆಯಲಿದ್ದು, ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತಸ್ವಾಮೀಜಿ ಮೆರವಣಿಗೆ ಉದ್ಘಾಟಿಸಲಿದ್ದಾರೆ. ಶ್ರೀವಿರಕ್ತ ಮಠದಿಂದ ಪ್ರಾರಂಭವಾಗುವ ಮೆರವಣಿಗೆ ಬಿ.ರಾಚಯ್ಯ ಜೋಡಿರಸ್ತೆ, ಶ್ರೀಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ, ಸುಲ್ತಾನ್ ಷರ್ೀ ವೃತ್ತ, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ ಹಾಗೂ ಜೋಡಿರಸ್ತೆ ಮಾರ್ಗವಾಗಿ ಸಾಗಿ ಶ್ರೀಮಠದಲ್ಲಿ ಮೆರವಣಿಗೆ ಅಂತ್ಯವಾಗುವುದು ಎಂದರು.

ಹಾಸನ ಜಿಲ್ಲೆಯ ಮಲ್ಲಿಕಾರ್ಜುನ ಬೆಟ್ಟ ಬೇಲೂರು ಮಠದ ಶ್ರೀಮಹಾಂತ ಬಸವಲಿಂಗಸ್ವಾಮೀಜಿ 11 ಗಂಟೆಗೆ ಪ್ರವಚನ ನೀಡುವರು. ಮಧ್ಯಾಹ್ನ 2 ಗಂಟೆಗೆ ತೊರವಳ್ಳಿಯ ಟಿ.ಸಿ.ಸೋಮಣ್ಣ ಮತ್ತು ತಂಡದಿಂದ ಭಕ್ತಿಗೀತೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದಲೂ ಹಲವು ಮಠಾಧೀಶರು ಈ ಜಯಂತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಜರುಗುವ 2 ದಿನಗಳು ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, ಅಂದಾಜು 50 ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net