ಕೊಳ್ಳೇಗಾಲದಲ್ಲಿ ಮುಖ್ಯ ರಸ್ತೆ ತುಂಬಾ ಹಳ್ಳಗಳು

2-kglphoto-3,,,
Published on

ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಎಂಜಿಎಸ್‌ವಿ ವೃತ್ತದಿಂದ ಮಸೀದಿ ವೃತ್ತದವರೆಗಿನ ಡಾ.ರಾಜ್‌ಕುಮಾರ್ ರಸ್ತೆ, ಮಸೀದಿ ವೃತ್ತದಿಂದ ಅಂಬೇಡ್ಕರ್ ಪ್ರತಿಮೆ ವೃತ್ತದ ವರೆಗಿನ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಹಲವು ಗುಂಡಿಗಳು ನಿರ್ಮಾಣವಾಗಿದ್ದು, ಸುಗಮ ಸಂಚಾರಕ್ಕೆ ತೊಡಕಾಗಿದೆ.
ಕೊಳ್ಳೇಗಾಲ ಪಟ್ಟಣಕ್ಕೆ ಈ ಎರಡು ರಸ್ತೆಗಳೇ ಪ್ರಮುಖ. ನಗರಸಭೆ, ಪಟ್ಟಣ ಪೊಲೀಸ್ ಠಾಣೆ, ಪಂಪ್‌ಹೌಸ್ ಸೇರಿದಂತೆ ಹೋಟೆಲ್, ಮೆಡಿಕಲ್, ಹಾಲಿನ ಡೈರಿ, ಇನ್ನಿತರ ಎಲ್ಲ ರೀತಿಯ ವಾಣಿಜ್ಯ ಮಳಿಗೆಗಳು ಹೆಚ್ಚಿರುವುದರಿಂದ ದಿನವಿಡಿ ವಾಹನಗಳ ಸಂಚಾರದಿಂದ ಕೂಡಿರುತ್ತದೆ.

ಎಂಜಿಎಸ್‌ವಿ ವೃತ್ತದ ಸಮೀಪ ಹಾಗೂ ನ್ಯೂ ರವಿ ಮೆಡಿಕಲ್ ಎದುರು ರಸ್ತೆಯಲ್ಲಿ ಅತೀ ಹೆಚ್ಚು ಗುಂಡಿ ಬಿದ್ದಿರುವುದರಿಂದ ಬೈಕ್ ಸವಾರರು ಆತಂಕದಲ್ಲೇ ಸಂಚರಿಸಬೇಕಿದೆ. ಅಲ್ಲದೇ ಕೆಲವಾರು ಕಡೆ ಆಳವಾದ ಗುಂಡಿಯೂ ಇದೆ. ಮಳೆ ಬಿದ್ದ ಸಮಯದಲ್ಲಿ ನೀರಿನಿಂದ ಗುಂಡಿಗಳು ಭರ್ತಿಯಾಗುವುದರಿಂದ ವಾಹನ ಸವಾರರ ಅರಿವಿಗೆ ಬಾರದೇ ಅಪಘಾತಕ್ಕೀಡಾಗುವ ಸಂಭವವೇ ಹೆಚ್ಚು.ಜಿಲ್ಲೆಯಲ್ಲಿ ಕೊಳ್ಳೇಗಾಲ ವ್ಯಾಪಾರಕ್ಕೆ ಹೆಸರಾದ ಪಟ್ಟಣವಾಗಿರುವುದರಿಂದ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಜನ ಆಗಮಿಸುತ್ತಾರೆ.

ಮೊದಲೇ ಡಾ.ರಾಜ್ ಕುಮಾರ್ ರಸ್ತೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ ಕಿರಿದಾದ ಕಾರಣ ಯಾವಾಗಲೂ ವಾಹನ ದಟ್ಟಣೆ ಹೆಚ್ಚಿರುತ್ತದೆ. ಈ ನಡುವೆ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟಕರವಾಗಿದೆ ಇನ್ನಾದರೂ ನಗರಸಭೆ ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನಹರಿಸಿ ಗುಂಡಿ ಮುಚ್ಚಿಸಲು ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೊಳ್ಳೇಗಾಲದ ಎರಡು ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದನ್ನು ನಗರಸಭೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ ಗುಂಡಿ ಮುಚ್ಚಿಸುವ ಕೆಲಸ ಮಾಡಲಾಗುವುದು.ಎ.ರಮೇಶ್, ನಗರಸಭೆ ಆಯುಕ್ತರು, ಕೊಳ್ಳೇಗಾಲ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ರಾಜ್‌ಕುಮಾರ್ ಗುಂಡಿಗಳಿಂದ ಅಧ್ವಾನವಾಗಿದೆ. ಸವಾರರು ಎಚ್ಚರ ತಪ್ಪಿದರೆ ಬಿದ್ದು ಕೈ, ಕಾಲು ಮುರಿದುಕೊಳ್ಳುವ ಪರಿಸ್ಥಿತಿ ಇದೆ. ಈಗಾಗಲೇ ಹಲವಾರು ಜನರು ಬಿದು, ಸಣ್ಣ-ಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಗರಸಭೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು.ವಿನಯ್, ಪಟ್ಟಣ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net