

ಚಾಮರಾಜನಗರ: ಸೈಬರ್ ವಂಚನೆಯಲ್ಲಿ ದೊಡ್ಡ ಸದ್ದು ಮಾಡುತ್ತಿರುವ ‘ಡಿಜಿಟಲ್ ಅರೆಸ್ಟ್’ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ನಡೆದಿದೆ. ಅನಕ್ಷರಸ್ಥರಲ್ಲ ಶುಶಿಕ್ಷಿತರೇ ಸಿಬಿಐ ಮತ್ತು ಪೊಲೀಸ್ ಹೆಸರಿನಲ್ಲಿ ಸೈಬರ್ ಮೋಸಕ್ಕೆ ಬೆಲೆ ತೆತ್ತಿದ್ದಾರೆ.
ಈ ಮಾಹಿತಿಯನ್ನು ಚಾಮರಾಜನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ (ಸಿ.ಇ.ಎನ್) ಪೊಲೀಸ್ ಠಾಣೆ ನೀಡಿದೆ. ಸೈಬರ್ ವಂಚನೆಯ ಮಾಯಾಜಾಲವಾಗಿರುವ ‘ಡಿಜಿಟಲ್ ಅರೆಸ್ಟ್’ಗೆ ವೈದ್ಯರು ಮತ್ತು ಇಂಜಿನಿಯರ್‌ಗಳೇ ಸಿಲುಕಿದ್ದಾರೆ.
ಜಿಲ್ಲೆಯ ವೈದ್ಯನೊಬ್ಬನಿಗೆ ಕರೆ ಮಾಡಿ ಸಿಬಿಐ ಹೆಸರಿನಲ್ಲಿ ಮಾತನಾಡಿದ ಸೈಬರ್ ವಂಚಕರು, ನೀವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದೀರ ಎಂದು ಹೆದರಿಸಿದ್ದಾರೆ. ವಿಡಿಯೋ ಕಾಲ್ ಮಾಡಿ ಕುಳಿತಲ್ಲೇ ಕೂರಬೇಕು. ಯಾರಿಗೂ ೆನ್ ಮಾಡಬಾರದು. ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದಿದ್ದಾರೆ.
ಬಳಿಕ ಆಧಾರ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಎಲ್ಲವನ್ನೂ ಪಡೆದುಕೊಂಡು ಲಕ್ಷಾಂತರ ರೂ. ಕದ್ದಿದ್ದಾರೆ. ಇದೇ ರೀತಿ ಇಂಜಿಯರ್ ಒಬ್ಬರಿಗೂ ಕರೆ ಬಂದಿದ್ದು, ಅವರೂ ಸಹ ಡಿಜಿಟಲ್ ಅರೆಸ್ಟ್ ಆಗಿ ಹಣ ಕಳೆದುಕೊಂಡಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ವೈದ್ಯ ಮತ್ತು ಇಂಜಿನಿಯರ್ ನಂತರದ ದಿನಗಳಲ್ಲಿ ತಮ್ಮ ಹೆಸರು ಬಹಿರಂಗಗೊಂಡು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ದೂರು ನೀಡಿಲ್ಲ ಎಂದು ತಿಳಿದುಬಂದಿದೆ.
ಮೋಸ ಮಾಡ್ತಿರೋದು ಹೇಗೆ?: ಮೊಬೈಲ್ ತಂತ್ರಜ್ಞಾನ ಶ್ರೀಸಾಮಾನ್ಯರಿಗೆ ಎಷ್ಟು ಅನುಕೂಲವಾಗಿದೆಯೋ, ಅಷ್ಟೇ ತೊಂದರೆಯನ್ನು ಅನುಭವಿಸುವಂತಾಗಿದೆ. ಕೆಲವು ಸೈಬರ್ ವಂಚಕರು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಜನರಿಗೆ ವಂಚನೆ ಮಾಡುತ್ತಿರುವುದು ದಿನೇ ದಿನೇ ಹೆಚ್ಚುತ್ತಲೇ ಇದೆ. ಡೆಬಿಟ್ ಕಾರ್ಡ್ ಮಾಡಿಕೊಡುವುದಾಗಿ ವಂಚನೆ, ಒಟಿಪಿ ಮೂಲಕ ಮೋಸ, ಉಡುಗೊರೆ ಕಳುಹಿಸುವ ವಂಚನೆ, ಉದ್ಯೋಗ ದೊರಕಿಸುವ ವಂಚನೆ, ಹೊಡಿಕೆ ಹೆಸರಿನಲ್ಲಿ ಮೋಸ, ಸಾಲ ನೀಡುವುದಾಗಿ ವಂಚಿಸುವುದು, ಟವರ್ ಸ್ಥಾಪನೆ ಮಾಡುವುದಾಗಿ ವಂಚಿಸುವುದು, ಲಾಟರಿ ವಂಚನೆ, ಸಾಮಾಜಿಕ ಜಾಲತಾಣಗಳ ಮೂಲಕ ವಂಚಿಸುವುದು, ಮೊಬೈಲ್‌ಗಳಿಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ವಂಚಿಸಲಾಗಿದೆ.
ಕೆಲವರಿಗೆ ವಾಪಸ್ ಹಣ ಸಿಕ್ತು
ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ ಘಟಕದ ಪೊಲೀಸರು ವಂಚನೆಗೆ ಒಳಗಾದವರಿಗೆ ಹಣ ವಾಪಾಸ್ ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 2018ರಲ್ಲಿ ದಾಖಲಾಗಿರುವ 3 ಕೇಸ್‌ಗಳಲ್ಲಿ ಒಬ್ಬರಿಗೆ ಹಣ ವಾಪಸ್ ಮಾಡಿದ್ದು, ಒಂದು ಕೇಸ್ ನ್ಯಾಯಾಲಯದ ಹಂತದಲ್ಲಿದೆ. 2019ರಲ್ಲಿ ದಾಖಲಾದ 21 ಪ್ರಕರಣಗಳಲ್ಲಿ 3 ರಲ್ಲಿ ಹಣ ಹಿಂದಿರುಗಿದೆ. 2020ರಲ್ಲಿ ದಾಖಲಾದ 8 ಕೇಸ್‌ಗಳಲ್ಲಿ 4 ರಲ್ಲಿ ಕಳೆದುಕೊಂಡಿರುವ ಹಣ ದೊರಕಿದೆ. 2021ರಲ್ಲಿ ದಾಖಲಾದ 7 ಪ್ರಕರಣಗಳಲ್ಲಿ 4 ರಲ್ಲಿ ಹಣ ದೊರಕಿದ್ದು, 2 ಕೇಸ್ ನ್ಯಾಯಾಲಯದ ಹಂತದಲ್ಲಿದೆ. 2022 ರಲ್ಲಿ ದಾಖಲಾದ 13 ಪ್ರಕರಣಗಳಲ್ಲಿ 8 ಪ್ರಕರಣಗಳನ್ನು ಭೇದಿಸಲಾಗಿದೆ. 2023ರಲ್ಲಿ ದಾಖಲಾದ 24 ಪ್ರಕರಣಗಳಲ್ಲಿ 18 ಪ್ರಕಣಗಳಲ್ಲಿ ಕಳೆದುಕೊಂಡವರಿಗೆ ಹಣ ಹಿಂದಿರುಗಿಸಲಾಗಿದೆ.
ನೆರವಾಗುತ್ತಿದೆ ಸಹಾಯವಾಣಿ:
ಸೈಬರ್ ವಂಚನೆಗೆ ಒಳಗಾಗುತ್ತಿರುವವರಿಗೆ ಸೈಬರ್ ಅಪರಾಧ ಸಹಾಯವಾಣಿ 1930 ನೆರವಿಗೆ ಬರುತ್ತಿದೆ. ಇಂತಹ ಯಾವುದೇ ಸೈಬರ್ ಅಪರಾಧಗಳು ಸಂಭವಿಸಿದಾಗ ಈ ಸಹಾಯವಾಣಿಗೆ ಸಂಪರ್ಕಿಸಬಹುದು. ಇತ್ತೀಚೆಗೆ ಪ್ರತಿ ಪೊಲೀಸ್ ಠಾಣೆಗಳಲ್ಲೂ ಸೈಬರ್ ವಂಚನೆಗೆ ಸಂಬಂಧಿಸಿದಂತೆ ದೂರು ತೆಗೆದುಕೊಳ್ಳಬೇಕು ಎಂದು ಡಿಜಿಪಿ ಅವರು ಆದೇಶ ನೀಡಿದ್ದು, ವಂಚನೆಗೆ ಒಳಗಾದವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ. ದೊಡ್ಡ ಮಟ್ಟದಲ್ಲಿ ಹಣ ವಂಚನೆಯಾಗಿದ್ದು, ಇದನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದರೆ ಪೊಲೀಸ್ ವರಿಷ್ಠಾಧಿಕಾರಿಗಳ ಸಲಹೆಯಂತೆ ಸೆನ್ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮೊಬೈಲ್ ಬಳಸುವಾಗ ಜಾಗೃತಿ ವಹಿಸಬೇಕಾಗಿದ್ದು, ಇಂತಹ ವಂಚನೆಗಳಿಗೆ ಆಸ್ಪದ ನೀಡಬಾರದು. ಒಂದು ವೇಳೆ ಇಂತಹ ವಂಚನೆಗಳು ನಡೆದರೆ ಸೈಬರ್ ಅಪರಾಧ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ಸೆನ್ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಸಾಗರ್ ಮಾಹಿತಿ ನೀಡಿದರು.
ಮುಖ್ಯವಾಗಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಾದ ೇಸ್ಬುಕ್ ಇನ್ನಿತರೆ ಆ್ಯ್ಗಳಲ್ಲಿ ಬರುವ ಹಣ ಹೂಡಿಕೆ ಜಾಹೀರಾತುಗಳಿಗೆ ಮೋಸಹೋಗಬಾರದು. ಟಾಸ್ಕ್ ಕಂಪ್ಲೀಟ್ ಆ್ಯಪ್‌ಗಳಿಗೆ ಮಾರುಹೋಗಬಾರದು ಹಾಗೂ ಪೊಲೀಸ್ ಹೆಸರಿನಲ್ಲಿ ನಂಬಿಸಿ ಯಾಮಾರಿಸುವ ಮೋಸಕ್ಕೆ ಬಲಿಯಾಗಬಾರದು. ಮೊಬೈಲ್ ಬಳಕೆಯಲ್ಲಿ ಅತ್ಯಂತ ಜಾಗೃತಿ ವಹಿಸಬೇಕಿದೆ.ಎಸ್.ಎಲ್.ಸಾಗರ್, ಸಬ್ ಇನ್ಸ್‌ಪೆಕ್ಟರ್, ಸೆನ್ ಪೋಲಿಸ್ ಠಾಣೆ, ಚಾಮರಾಜನಗರ.