

ಗುಂಡ್ಲುಪೇಟೆ: ತಾಯಿಯಿಂದ ಬೇರಾಗಿದ್ದ ಚಿರತೆ ಮರಿಯನ್ನು ಅರಣ್ಯಾಧಿಕಾರಿಗಳು ಮೈಸೂರು ಮೃಗಾಲಯಕ್ಕೆ ಹಸ್ತಾಂತರಿಸಿದ್ದಾರೆ.
ಕಳೆದ ಭಾನುವಾರ ತಾಲೂಕಿನ ಪಡಗೂರು ಗ್ರಾಮದ ಶಿವಲಿಂಗಪ್ಪ ಎಂಬುವವರ ಕಬ್ಬಿನ ಗದ್ದೆಯಲ್ಲಿ ಚಿರತೆ ಕಾರ್ಮಿಕರ ಕಣ್ಣಿಗೆ ಕಾಣಿಸಿಕೊಂಡಿತ್ತು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಚಿರತೆ ಸೆರೆಗೆ ಮುಂದಾದರೂ ಜನರ ಗದ್ದಲದಿಂದ ಬೇರೆಡೆ ಓಡಿಹೋಗಿತ್ತು. ಮರುದಿನ ಗದ್ದೆಯಲ್ಲಿ ಚಿರತೆಯ ಮರಿ ಪತ್ತೆಯಾಗಿತ್ತು. ಮರಿಯನ್ನು ತಾಯಿ ಜತೆ ಸೇರಿಸಲು ಅರಣ್ಯ ಇಲಾಖೆ ನಾಲ್ಕಾರು ದಿನ ಕಾದು ನೋಡಿದರೂ ತಾಯಿ ಅತ್ತ ಸುಳಿಯಲಿಲ್ಲ.
ಈ ಹಿನ್ನೆಲೆಯಲ್ಲಿ ಪಶುವೈದ್ಯರ ಸಲಹೆ ಮೇರೆಗೆ ಮರಿ ಚಿರತೆಯನ್ನು ಶುಕ್ರವಾರ ರಾತ್ರಿ ಮೈಸೂರಿಗೆ ಕೊಂಡೊಯ್ದು ಮೃಗಾಲಯಕ್ಕೆ ಒಪ್ಪಿಸಲಾಯಿತು ಎಂದು ಬಫರ್ ವಲಯದ ಪ್ರಭಾರ ಆರ್‌ಎಫ್‌ಒ ಮಲ್ಲೇಶ್ ವಿಜಯವಾಣಿಗೆ ತಿಳಿಸಿದ್ದಾರೆ.