

ಯಳಂದೂರು ; ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಶನಿವಾರ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡಬೇಕೆಂದು ವೈದ್ಯರಿಗೆ ಸೂಚಿಸಿದರು.
ಬಿಳಿಗಿರಿರಂಗನ ಬೆಟ್ಟದ ಗವಿಬೋರೆಯಲ್ಲಿ ಶನಿವಾರ ಮಧ್ಯಾಹ್ನ ಖಾಸಗಿ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಜನರಿಂದ ಮಾಹಿತಿ ಪಡೆದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ಮಾಡಿ ಕ್ರಮ ವಹಿಸುವುದರ ಜತೆಗೆ ಗಾಯಾಳುಗಳು ಚಿಕಿತ್ಸೆ ಪಡೆದ ನಂತರ ಸ್ವಗ್ರಾಮಕ್ಕೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು, ತಾಲೂಕು ವೈದಾಧಿಕಾರಿ ಡಾ.ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.