

ಯಳಂದೂರು : ತಾಲೂಕಿನ ಬಿಳಿಗಿರಿರಗನಬೆಟ್ಟ ವ್ಯಾಪ್ತಿಯ ಗವಿಬೋರೆ ಬಳಿ ಶನಿವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂಜುನಗೂಡು ತಾಲೂಕಿನ ಹಗಿನವಾಳು ಗ್ರಾಮದ ಮುದ್ದಶೆಟ್ಟಿ(50), ಪುಟರಾಜರಾಜಮ್ಮ (75), ಮಹದೇವಮ್ಮ (35), ಸಿದ್ದಶೆಟ್ಟಿ(36), ಮಹದೇವಶೆಟ್ಟಿ(55), ಮಹದೇವಮ್ಮ (50), ಸಿದ್ದಮ್ಮ (50), ಸಿದ್ದಮ್ಮ (70), ಚೈತ್ರಾ (19), ರವಿ(35), ಕುಮಾರ (35), ವಿಕ್ರಾಂತ್ (5), ಸಣ್ಣಶೆಟ್ಟಿ (55), ಸುನೀತಾ (17) ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ನಂಜುಂಡಗೂಡು ತಾಲೂಕಿನ ಹಗಿನವಾಳು ಗ್ರಾಮದ ನಿವಾಸಿಗಳು ಬಿಳಿಗಿರಿ ರಂಗನ ಬೆಟ್ಟಕ್ಕೆ ಆಗಮಿಸಿದ್ದು, ಮಧ್ಯಾಹ್ನ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಊಟಕ್ಕೆ ವಡಗೆರೆ ಸಮೀಪದ ತೋಟಕ್ಕೆಂದು ಬೆಟ್ಟದಿಂದ ಬರುವಾಗ ಗವಿಬೋರೆ ಸಮೀಪ ಬಸ್ ಕೆಳಗಿಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಪಿಯಾಗಿದೆ. ಆ ಸಮಯದಲ್ಲಿ ತಡೆಗೋಡೆ ಹಾಗೂ ಮರಗಳು ಅಡ್ಡವಿದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಘಟನೆ ಬಳಿಕ ಸ್ಥಳದಲ್ಲಿದ್ದವರು ತುರ್ತು ವಾಹನಗಳ ಮೂಲಕ ಗಾಯಾಳುಗಳನ್ನು ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತೆಗೆ ಚಾಮರಾಜನರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಯಳಂದೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರಪ್ರಸಾದ್, ಸಬ್ ಇನ್ಸ್‌ಪೆಕ್ಟರ್ ಮಹದೇವ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಘಟನೆ ಬಳಿಕ ಖಾಸಗಿ ಬಸ್ ಚಾಲಕ ನಾಪತ್ತೆಯಾಗಿದ್ದಾನೆ.