

ಚಾಮರಾಜನಗರ : ಬ್ಯಾಂಕ್ ಪ್ರತಿನಿಧಿಯೊಬ್ಬರ ಖಾತೆಗೆ ಸೈಬರ್ ವಂಚಕರು ಕನ್ನ ಹಾಕಿ 5 ಲಕ್ಷ ರೂ. ಕದಿಯುವ ಯತ್ನ ಮಾಡಿದ್ದು 1.60 ಲಕ್ಷ ರೂ. ದೋಚಿದ್ದಾರೆ.
ನಗರದ ಯೂನಿಯನ್ ಬ್ಯಾಂಕ್‌ನ ಪ್ರತಿನಿಧಿ ಮದನ್‌ಕುಮಾರ್ ಅವರೇ ವಂಚನೆಗೊಳಗಾದವರು. ಅವರ ಬ್ಯಾಂಕ್ ಖಾತೆಗೆ ಮೇ 28 ರಂದು ಸೈಬರ್ ವಂಚಕರು ಕನ್ನ ಹಾಕಿದ್ದು, 5 ಲಕ್ಷ ರೂ. ಕದಿಯುವ ಪ್ರಯತ್ನವನ್ನು ಮಾಡಿ, ಅದರಲ್ಲಿ 1.60 ಲಕ್ಷ ರೂ. ವರ್ಗಾವಣೆ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಉಳಿಕೆ ಹಣವನ್ನು ವರ್ಗಾವಣೆ ಮಾಡುವಷ್ಟರಲ್ಲೇ ಮದನ್‌ಕುಮಾರ್ ಎಚ್ಚೆತ್ತುಕೊಂಡು ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆಮಾಡಿ, ತಮ್ಮ ಖಾತೆಯ ಹಣದ ವಹಿವಾಟನ್ನು ಸ್ಥಗಿತಗೊಳಿಸುವಂತೆ ವಿನಂತಿಸಿದ್ದಾರೆ. ತಕ್ಷಣವೇ ಸೈಬರ್ ಕ್ರೈಂ ಪೊಲೀಸ್ ಸಿಬ್ಬಂದಿ ಮದನ್‌ಕುಮಾರ್ ಅವರ 3.40 ಲಕ್ಷ ರೂ.ಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ವಂಚಕರು ಕದಿಯಲು ಅವಕಾಶವಾಗಿಲ್ಲ.
ಈ ಕುರಿತು ನ್ಯಾಯಾಲಯದಲ್ಲಿ ಮದನ್‌ಕುಮಾರ್ ಅವರು 3.40 ಲಕ್ಷ ರೂ. ತಮ್ಮದೆಂದು ಸೈಬಲ್ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದು, ಮೇ 30 ರಂದು ನ್ಯಾಯಾಲಯವು ಅವರ ಖಾತೆಗೆ ಹಣ ಹಾಕುವಂತೆ ಸೈಬರ್ ಕ್ರೈಂ ಪೊಲೀಸರಿಗೆ ಆದೇಶ ನೀಡಿದೆ. ಇನ್ನು 2-3 ದಿನದಲ್ಲಿ ಮದನ್‌ಕುಮಾರ್ ಅವರ ಖಾತೆಗೆ ಈ ಹಣ ಜಮಾ ಆಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಿದು ವಂಚನೆ?
ಯೂನಿಯನ್ ಬ್ಯಾಂಕ್ ಪ್ರತಿನಿಧಿ ಮದನ್‌ಕುಮಾರ್ ಅವರ ವಾಟ್ಸ್‌ಆ್ಯಪ್‌ಗೆ ಸೈಬರ್ ವಂಚಕರು ಲಿಂಕ್‌ವೊಂದನ್ನು ಕಳುಹಿಸಿದ್ದಾರೆ. ಆ ಲಿಂಕ್ ಅನ್ನು ಓಕೆ ಮಾಡಿರುವ ಮದನ್ ಅವರು, ಅದರಲ್ಲಿ ತಮ್ಮ ವಿವರಗಳನ್ನು ದಾಖಲಿಸಿದ್ದಾರೆ. ಬಳಿಕ ಇವರು ನಿರ್ವಹಿಸುವ ಎರಡು ಖಾತೆಗಳಲ್ಲಿರುವ ಹಣವನ್ನು ವಂಚಕರು ದೋಚಲು ಯತ್ನಿಸಿದ್ದಾರೆ. ಎರಡು ಖಾತೆಯಲ್ಲಿ ತಲಾ 2.5 ಲಕ್ಷ ರೂ. ಇತ್ತು. ಗ್ರಾಹಕರಿಗೆ ಹಣ ನೀಡಲು ಹೊರಟಾಗ ಖಾತೆಯಲ್ಲಿ ಹಣವಿಲ್ಲದ್ದು ಅರಿವಿಗೆ ಬಂದಿದೆ. ತಕ್ಷಣವೇ ಎಚ್ಚೆತ್ತುಕೊಂಡು ಪೊಲೀಸರು ಮತ್ತು ಸೈಬರ್ ಕ್ರೈಂ ಸಹಾಯವಾಣಿಗೆ ಕರೆ ಮಾಡಿದ್ದರು. ನಂತರ ಒಂದು ಖಾತೆಯಲ್ಲಿ ಇದ್ದ 2.50 ಲಕ್ಷ ರೂ. ಹಾಗೂ ಮತ್ತೊಂದು ಖಾತೆಯಲ್ಲಿ 90 ಸಾವಿರದಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ನ್ಯಾಯಾಲಯ ಆದೇಶದಂತೆ ಶೀಘ್ರದಲ್ಲೇ ಅವರ ಖಾತೆಗೆ 3.40 ಲಕ್ಷ ರೂ. ವರ್ಗಾವಣೆಯಾಗಲಿದೆ ಎಂದು ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ(ಸೆನ್) ಘಟಕದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ವಿಜಯವಾಣಿಗೆ ಮಾಹಿತಿ ನೀಡಿದರು.