ಹಸಿರಿನಿಂದ ಕಂಗೊಳಿಸುತ್ತಿದೆ ರಾಷ್ಟ್ರೀಯ ಉದ್ಯಾನ

01-GPT-1A
Published on

ಗುಂಡ್ಲುಪೇಟೆ: ಇತ್ತೀಚೆಗೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿ ಜೀವಕಳೆ ಮರುಕಳಿಸಿದ್ದು, ಒಣಗಿ ನಿಂತಿದ್ದ ರಾಷ್ಟ್ರೀಯ ಉದ್ಯಾನ ಹಸಿರಿನಿಂದ ಕಂಗೊಳಿಸುತ್ತಿದೆ.

ಸಮರ್ಪಕ ಮಳೆ ಬೀಳದೆ ಕಾರಣ ಬಂಡೀಪುರ ಅರಣ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು. ಮರ,ಗಿಡ ಮತ್ತು ಹುಲ್ಲುಗಳು ಒಣಗಿ ಬರಡಾಗಿತ್ತು. ಕೆರೆಕಟ್ಟೆಗಳು ಬರಿದಾಗಿ ವನ್ಯಜೀವಿಗಳು ನೀರು ಹಾಗೂ ಆಹಾರವನ್ನರಸಿ ಬೇರೆಡೆ ತೆರಳಿದ್ದವು. ಆದರೆ ಈ ಬಾರಿ ಸಕಾಲದಲ್ಲಿ ಪೂರ್ವ ಮುಂಗಾರು ಕೈಹಿಡಿದ ಪರಿಣಾಮ ಕೆಲವೇ ದಿನಗಳಲ್ಲಿ ಅರಣ್ಯಪ್ರದೇಶ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಬಂಡೀಪುರ ವಲಯಕ್ಕಿಂತಲೂ ಕೇರಳ ರಸ್ತೆಯಲ್ಲಿರುವ ಮದ್ದೂರು ಹಾಗೂ ಮೂಲೆಹೊಳೆ ವಲಯಗಳಿಗೆ ಹೆಚ್ಚಿನ ಮಳೆಬಿದ್ದ ಪರಿಣಾಮ ಬತ್ತಿಹೋಗಿದ್ದ ಕೆರೆಕಟ್ಟೆ ಹಾಗೂ ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡು ವನ್ಯಜೀವಿಗಳಿಗೆ ಕುಡಿಯಲು ನೀರು ಹಾಗೂ ಮೇವು ದೊರೆತಂತಾಗಿದೆ.

ಅರಣ್ಯ ಪ್ರದೇಶದಲ್ಲಿ ಎಲೆ ಉದುರಿ ಒಣಗಿದ್ದ ಮರಗಿಡಗಳು, ಸುಟ್ಟುಕರಕಲಾಗಿದ್ದ ಹುಲ್ಲುಗರಿಕೆಗಳು ಚಿಗುರಿವೆ. ಒಂದೆಡೆ ತಂಪಾದ ಶುದ್ಧಗಾಳಿ, ಕಣ್ಮನ ಸೆಳೆಯುವ ಹಸಿರು, ಸ್ವಚ್ಛಂದವಾಗಿ ವಿಹರಿಸುವ ವನ್ಯ ಜೀವಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.
ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ಹುಲ್ಲು ಮೇಯುತ್ತಿರುವ ನೂರಾರು ಚುಕ್ಕೆ ಜಿಂಕೆಗಳು, ನವಿಲುಗಳು ಸ್ವಾಗತಿಸುತ್ತಿವೆ. ಹಿಂಡಾಗಿ ಸಾಗುವ ಕಾಟಿಗಳು ಹಾಗೂ ಆನೆಗಳು ರಸ್ತೆ ದಾಟುತ್ತಿರುವ ವಾಹನ ಸವಾರರಿಗೆ ಮೈಜುಮ್ಮೆನ್ನಿಸುವಂತೆ ಮಾಡಿವೆ. ದೊಡ್ಡಮರಗಳ ಮೇಲೆ ಚಿರತೆಗಳು ಮಲಗಿರುವ ದೃಶ್ಯ ರೋಮಾಂಚನ ನೀಡುತ್ತಿದೆ.

ಸಫಾರಿಗೆ ತೆರಳುವ ಪ್ರವಾಸಿಗರಿಗೆ ಪ್ರತಿದಿನವೂ ಒಂದಲ್ಲ ಒಂದುಕಡೆ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು ಪ್ರವಾಸಿಗರನ್ನು ಪುಳಕಗೊಳ್ಳುವಂತೆ ಮಾಡುತ್ತಿವೆ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ಆನೆಗಳ ಹಿಂಡು ಗುಂಪು ಗುಂಪಾಗಿ ಸಾಗಿ ಕೆರೆಗಳಲ್ಲಿ ಜಲಕ್ರೀಡೆಯಲ್ಲಿ ತೊಡಗುತ್ತಿವೆ. ಸೀಳುನಾಯಿಗಳ ಗುಂಪು ತನ್ನ ಆಹಾರವನ್ನು ಬೇಟೆಯಾಡುವುದನ್ನು ಪ್ರವಾಸಿಗರು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವುದು ಪ್ರವಾಸಿಗರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.


ಬಂಡೀಪುರ ಸಫಾರಿ ವಲಯದ ಮಂಗಲ ಡ್ಯಾಂ, ನಂಜನಾಪುರಕೆರೆ, ಸೌತ್‌ಕೆರೆ, ಮೂರ‌್ಕೆರೆ, ಹುಲಿಕಟ್ಟೆ, ಕಡಮತ್ತೂರುಕಟ್ಟೆ, ಕೊಳಕಮಲ್ಲೀಕಟ್ಟೆ ಕೆರೆಗಳ ಬಳಿ ಹುಲಿ ಕಾಣಬರುತ್ತಿದ್ದು ಪ್ರವಾಸಿಗರಿಗೆ ಮುದ ನೀಡುತ್ತಿದೆ. ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಬತ್ತಿಹೋಗಿದ್ದ ಮೂಲೆಹೊಳೆಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಹುಲಿ ಯೋಜನೆಯ 374 ಕೆರೆಗಳ ಪೈಕಿ ಸುಮಾರು 150 ಕೆರೆಗಳಿಗೆ ನೀರು ಹರಿದುಬರುತ್ತಿದೆ. ಬರ ಹಾಗೂ ಬೇಸಿಗೆ ಬಿಸಿಲಿನಲ್ಲಿ ಬಸವಳಿದಿದ್ದ ವನ್ಯಜೀವಿಗಳು ಸಹಜ ಜೀವನಕ್ಕೆ ಮರಳುತ್ತಿವೆ. ಹುಲಿ ಯೋಜನೆಯ ವೈನಾಡು ಗಡಿಯಲ್ಲಿರುವ ಮೂಲೆಹೊಳೆಗೆ ದಾಖಲೆ ಪ್ರಮಾಣದಲ್ಲಿ ಮಳೆಬಿದ್ದ ಪರಿಣಾಮ ಹಚ್ಚ ಹಸಿರು ಕಂಗೊಳಿಸುತ್ತಿದೆ. ಏಪ್ರಿಲ್‌ನಲ್ಲಿ 45 ಮಿ.ಮೀ. ಮಳೆ ಬಿದ್ದಿದ್ದರೆ ಮೇ 27ರಂದು ಒಂದೇ ದಿನ 80 ಮಿ.ಮೀ. ಮಳೆಬಿದ್ದಿದೆ.

ಎರಡು ತಿಂಗಳಿಂದ ಹುಲಿ ಯೋಜನೆ ಪ್ರದೇಶದಲ್ಲಿ ಉತ್ತಮ ಮಳೆ ಬಿದ್ದ ಪರಿಣಾಮ ಕೆರೆಕಟ್ಟೆಗಳಿಗೆ ನೀರು ಹರಿದುಬರುತ್ತಿದೆ. ಇದರಿಂದ ಈ ಬಾರಿ ವನ್ಯಜೀವಿಗಳ ಕುಡಿಯುವ ನೀರು ಹಾಗೂ ಆಹಾರಕ್ಕೆ ಯಾವುದೇ ಕೊರತೆಯಾಗುವುದಿಲ್ಲ. ಎಲ್ಲೆಡೆಯೂ ವನ್ಯಜೀವಿಗಳ ದರ್ಶನವಾಗುತ್ತಿರುವುದರಿಂದ ದಿನೆ ದಿನೇ ಸಫಾರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.ನವೀನ್ ಎಸಿಎಫ್, ಬಂಡೀಪುರ ಉಪ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net