

ಕೊಳ್ಳೇಗಾಲ: ಪಟ್ಟಣದ ಉಪವಿಭಾಗ ಆಸ್ಪತ್ರೆಯಲ್ಲಿ ಶುಕ್ರವಾರ ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಚಾಲನೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡಿ, ನಮ್ಮ ಮುಂದಿನ ಭವಿಷ್ಯದ ಮಕ್ಕಳನ್ನು ಹಾಗೂ ಯುವ ಪೀಳಿಗೆಯನ್ನು ತಂಬಾಕು ಉದ್ಯಮಗಳು ಮಾಡುತ್ತಿರುವ ಕುತಂತ್ರದಿಂದ ರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿವರ್ಷ ತಂಬಾಕು ವಿರೋಧಿ ದಿನ ಆಚರಿಸಲಾಗುತ್ತಿದೆ. ಪ್ರತಿ ವರ್ಷ ತಂಬಾಕಿನಿಂದ ವಿಶ್ವದಾದ್ಯಂತ 70 ರಿಂದ 80 ಲಕ್ಷ ಜನ ಮೃತಪಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್. ನಂದಿನಿ ಮಾತನಾಡಿ, ಪೋಷಕರು ಮತ್ತು ಮನೆಯಲ್ಲಿರುವ ವಯಸ್ಸಾದವರು ತಂಬಾಕು ಉತ್ಪನ್ನಗಳನ್ನು ತರಲು ಮಕ್ಕಳನ್ನು ಬಳಸದಂತೆ ಕಡ್ಡಾಯವಾಗಿ ಜಾಗೃತಿ ಮೂಡಿಸುವುದು ಹಾಗೂ ನಿಗಾ ವಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ತಂಬಾಕಿನಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ವಿಶ್ವದಾದ್ಯಂತ ತಂಬಾಕು ಉತ್ಪನ್ನ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸಲು ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ವಿರೋಧಿ ದಿನ ಆಚರಣೆ ಮಾಡಲಾಗುತ್ತದೆ ಎಂದರು.
ವಕೀಲ ಎಲ್.ರಾಜೇಂದ್ರ, ಸರ್ಕಾರಿ ಉಪವಿಭಾಗ ಆಸ್ಪತ್ರೆಯ ವ್ಯೆದ್ಯಾಧಿಕಾರಿ ಡಾ. ರಾಜಶೇಖರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್.ಗೋಪಾಲ್, ವಕೀಲರ ಸಂಘದ ಅಧ್ಯಕ್ಷ ಸಿ.ರವಿ, ಉಪಾಧ್ಯಕ್ಷ ಸಿ.ಆರ್.ನಿರ್ಮಲ, ಹಿರಿಯ ವಕೀಲ ಎನ್.ನಾಗರಾಜು ಮತ್ತಿತರಿದ್ದರು.