

ಚಾಮರಾಜನಗರ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ನಾಗೇಂದ್ರ ಅವರು ಕೂಡಲೇ ರಾಜಿನಾಮೆ ನೀಡಬೇಕು ಮತ್ತು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಒತ್ತಾಯಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಸುಮಾರು 147 ಕೋಟಿ ರೂ.ಗಳನ್ನು ಅಧಿಕಾರಿಗಳ ಮೂಲಕ ವಿವಿಧ ಬ್ಯಾಂಕ್‌ಗಳಿಗೆ ವಿನಾಕಾರಣ ವರ್ಗಾವಣೆ ಮಾಡಲಾಗಿದೆ. ಇಲಾಖೆಯ ವ್ಯವಸ್ಥಾಪಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದು, 6 ಪುಟಗಳ ಡೆತ್‌ನೋಟ್ ಬರೆದಿದ್ದಾರೆ. ಈ ಹಣದ ದುರುಪಯೋಗದಲ್ಲಿ ಮಂತ್ರಿಗಳ ಮೌಖಿಕ ಆದೇಶ ಇದೆ ಎಂದು ಡೆತ್‌ನೋಟ್‌ನಲ್ಲಿ ಹೇಳಿದ್ದಾರೆ. ಹಾಗಾಗಿ, ಸಚಿವ ನಾಗೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪರಿಶಿಷ್ಟ ವರ್ಗಗಳ ಮೀಸಲು ಕ್ಷೇತ್ರದಿಂದ ಗೆದ್ದು ಬಂದಿರುವ ಮಂತ್ರಿ ಇದಕ್ಕೆ ನಾನು ಕಾರಣರಲ್ಲ ಎಂದು ಹೇಳುತ್ತಿದ್ದಾರೆ. ನೀತಿ ಸಂಹಿತೆ ಜಾರಿ ಇರುವಾಗ ಹಣ ವರ್ಗಾವಣೆ ಆಗಿದೆ ಅಂದರೆ, ಅವರ ಮೌಖಿಕ ಆದೇಶದ ಮೇಲೆಯೇ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈ ಇಡೀ ಹಗರಣವನ್ನು ಸಿಬಿಐಗೆ ವಹಿಸಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ನಾಗೇಂದ್ರ ಅವರನ್ನು ಮಂತ್ರಿ ಮಂಡಲದಿಂದ ತೆಗೆದು ಹಾಕಬೇಕು. ಜೂ.6 ರವರೆಗೆ ರಾಜ್ಯ ಸರ್ಕಾರ ಈ ಹಗರಣದಲ್ಲಿ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲು ಗಡುವು ನೀಡುತ್ತೇವೆ. ಇಲ್ಲವಾದರೆ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ಒಂದು ವರ್ಷದಿಂದ ಹೆಜ್ಜೆ ಹೆಜ್ಜೆಗೂ ದಲಿತ ವಿರೋಧಿ ಎನ್ನುವುದನ್ನು ಸಾಬೀತು ಮಾಡುತ್ತಿದೆ. ಎಸಿ,್ಸ ಎಸ್ಟಿ ಮತಗಳನ್ನು ಪಡೆದು ನಾವು ದಲಿತರು ಮತ್ತು ಸಂವಿಧಾನದ ಪರ ಎನ್ನುತ್ತಾ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಎಸ್ಸಿ/ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ತಳಸಮುದಾಯಗಳಿಗೆ ಮೀಸಲು ಇಟ್ಟಿರುವ ಹಣ ದುರುಪಯೋಗ ಮಾಡಿರುವುದು ರಾಜ್ಯ ಸರ್ಕಾರ ದಲಿತ ವಿರೋಧಿ ಸರ್ಕಾರ ಎಂಬುದನ್ನು ತೋರುತ್ತದೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಂ.ರಾಮಚಂದ್ರು, ಅರಕಲವಾಡಿ ನಾಗೇಂದ್ರ, ಪಿ.ವೃಷಭೇಂದ್ರಪ್ಪ, ಕಾಡಹಳ್ಳಿ ಕುಮಾರ್, ರಾಜು ಹಾಜರಿದ್ದರು.
ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ:
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು, ಇದಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ವಾಲ್ಮೀಕಿ ನಾಯಕ ಸಮುದಾಯದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಒತ್ತಾಯಿಸಿದರು.
ಸಮುದಾಯದ ಉದ್ಧಾರಕ್ಕಾಗಿ ಸ್ಥಾಪಿಸಿರುವ ನಿಗಮದಲ್ಲಿ ಇಂತಹ ಹಗರಣ ನಡೆದಿರುವುದು ನಿಜಕ್ಕೂ ಎಲ್ಲರೂ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಕಾಂಗ್ರೆಸ್ ನಾಯಕ ಸಮಾಜದವರಿಗೇ ಮಂತ್ರಿ ಸ್ಥಾನ ನೀಡಿ, ಅವರಿಂದಲೇ ಗುಲಾಮಗಿರಿಯ ರಾಜಕಾರಣ ಮಾಡಿಸಿದೆ. ಕೂಡಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆಯಾಗಬೇಕು. ನಿಜವಾದ ಅಪರಾಧಿಯನ್ನು ಬಂಧಿಸಬೇಕು ಇಲ್ಲದಿದ್ದರೆ ಜಿಲ್ಲೆಯಲ್ಲಿ ಸಮುದಾಯದ ವತಿಯಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯಜಮಾನರಾದ ರಾಜು ನಾಯಕ್, ವಾಲ್ಮೀಕಿ ನಾಯಕ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ರಂಗಪ್ಪ ಇದ್ದರು.