

ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಜೂ.4ರಂದು ನಡೆಯಲಿದ್ದು, ಮತ ಎಣಿಕೆ ಕಾರ್ಯವನ್ನು ಜಾಗರೂಕತೆ ಹಾಗೂ ಜವಾಬ್ದಾರಿಯಿಂದ ನಿರ್ವಹಿಸುವಂತೆ ಚಾಮರಾಜನಗರ (ಪ.ಜಾ) ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸೂಚಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮತ ಎಣಿಕೆ ಹಿನ್ನೆಲೆಯಲ್ಲಿ ಸೂಕ್ಷ್ಮ ವೀಕ್ಷಕರು ಹಾಗೂ ಮತ ಎಣಿಕೆ ಅಧಿಕಾರಿಗಳಿಗೆ ಗುರುವಾರ ಆಯೋಜಿಸಲಾಗಿದ್ದ ಚುನಾವಣಾ ಮತ ಎಣಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮತ ಎಣಿಕೆಯು ನಗರದ ನಂಜನಗೂಡು ರಸ್ತೆಯಲ್ಲಿರುವ ಬೇಡರಪುರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಚುನಾವಣಾಧಿಕಾರಿಗಳ ಕಚೇರಿಯಿಂದ ನೀಡಿರುವ ಗುರುತಿನ ಚೀಟಿಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಹಾಜರಾಗಬೇಕು. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ಹಾಗೂ ಸ್ಮಾರ್ಟ್‌ವಾಚ್‌ಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರುವಂತಿಲ್ಲ ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದ ಕಾರ್ಯನಿರ್ವಹಣೆಗೆ ನಿಯೋಜಿಸಲಾಗಿರುವ ಮಾಸ್ಟರ್ ಟ್ರೈನರ್‌ಗಳು, ಮತ ಎಣಿಕೆ ಅಧಿಕಾರಿ, ಸಿಬ್ಬಂದಿ ಎಣಿಕೆ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಮತ ಎಣಿಕೆಯು ಸುಸೂತ್ರವಾಗಿ ನಡೆಯಲು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ನೋಡಲ್ ಅಧಿಕಾರಿ ಲಿಂಗರಾಜೇ ಅರಸ್ ಮಾತನಾಡಿ, ವಿದ್ಯುನ್ಮಾನ ಮತ ಯಂತ್ರದ ಮತ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. ಮತ ಎಣಿಕೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಸರಿಯಾದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆದು ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯಲ್ಲಿ ಮತದಾನ ಮತ್ತು ಮತ ಎಣಿಕೆ ಕಾರ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಹಾಗೂ ಸಂಪನ್ಮೂಲ ವ್ಯಕ್ತಿ ಸವೀನಾ, ಮಾಸ್ಟರ್ ಟ್ರೈನರ್‌ಗಳು, ಅಧಿಕಾರಿಗಳು, ಇತರರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.