

ಚಾಮರಾಜನಗರ : ಬಸವಾದಿ ಶರಣರು ಸ್ಥಾಪನೆ ಮಾಡಿದ ಲಿಂಗಾಯತ ಧರ್ಮ ಹಾಗೂ ಶರಣರು ರಚಿಸಿದ ವಚನಗಳು, ತತ್ವ, ಅದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಗಡಿ ಗ್ರಾಮ ಬಂದಿಗೌಡನಹಳ್ಳಿಯಲ್ಲಿ ಗುರುವಾರ ನಡೆದ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಸವಣ್ಣ ಹಾಗೂ ಇನ್ನಿತರ ಶರಣರು ರಚನೆ ಮಾಡಿದ ವಚನ ಸಾಹಿತ್ಯ ಜನರಲ್ಲಿ ಹೆಚ್ಚು ಅಕರ್ಷಣೆ ಮಾಡಿತ್ತು. ನುಡಿದಂತೆ ನಡೆಯುವ ಜತೆಗೆ ತಮ್ಮ ಜೀವನದ ಅನುಭವನ್ನು ವಚನ ಸಾಹಿತ್ಯದಲ್ಲಿ ದಾಖಲು ಮಾಡಿದರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ಧರ್ಮವನ್ನು ಬಸವಣ್ಣ ಪ್ರತಿಪಾದಿಸಿದರು. ಅವರು ಸ್ಥಾಪನೆ ಮಾಡಿದ ಧರ್ಮ ವಿಶ್ವ ವ್ಯಾಪಿಯಾಗಿದೆ. ಇಂತಹ ಶ್ರೇಷ್ಠವಾದ ಧರ್ಮದಲ್ಲಿ ನಾವೆಲ್ಲರೂ ಹುಟ್ಟಿದ್ದೇವೆ ಎಂಬುದೇ ಹೆಮ್ಮೆ ಎಂದು ಬಣ್ಣಿಸಿದರು.
ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರು ಸರ್ವಕಾಲಕ್ಕೂ ಸಲ್ಲುವಂತಹ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಮೌಢ್ಯ, ಕಂದಾಚಾರ ಹಾಗೂ ಭಗವಂತನ ಸ್ವರೂಪವಾದ ಲಿಂಗ ಪೂಜೆಯಿಂದ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟರು. ಭಕ್ತಿ ಮಾರ್ಗದಲ್ಲಿ ನಡೆದು ನಮ್ಮೆಲ್ಲರಿಗೂ ವಿಶ್ವಗುರುವಾದರು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಬಸವಣ್ಣ ಸಮ ಸಮಾಜ ನಿರ್ಮಾಣದ ಕನಸು ಕಂಡು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದರು. ವಚನ ಸಾಹಿತ್ಯದ ಮೂಲಕ ಧರ್ಮವನ್ನು ಉಳಿಸಲು ಮುಂದಾದರು. ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಿದರು ಎಂದರು.
ಇದೇ ಸಂದರ್ಭದಲ್ಲಿ ಸರ್ವ ಅಲಂಕೃತಗೊಂಡ ಬಸವೇಶ್ವರರ ಭಾವಚಿತ್ರ ಮೆರವಣಿಗೆಯು ಮಂಗಳವಾದ್ಯ, ವೀರಗಾಸೆ, ನಂದಿಧ್ವಜ, ಹುಲಿವಾಹನ ಹಾಗೂ ಬಸವಗಳ ಮೆರವಣಿಗೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.
ಬಸವ ಬಳಗದ ಬಸವಣ್ಣ, ಸೋಮಶೇಖರ್, ಗ್ರಾ.ಪಂ ಸದಸ್ಯ ಚಂದ್ರು, ಸೋಮು, ಮಾಜಿ ಸದಸ್ಯ ಬಾಬು, ಬಸವಣ್ಣ, ಉಮೇಶ್, ಕುಮಾರ್, ಎಂ.ಸಿ.ಬಸವಣ್ಣ, ಮಹದೇವಪ್ಪ ಇತರರಿದ್ದರು.