

ಚಾಮರಾಜನಗರ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಕೆ. ವಿವೇಕಾನಂದ ಅವರ ಪರವಾಗಿ ತಾಲೂಕಿನ ಹರವೆ, ಸಾಗಡೆ, ಅರಳಿಕಟ್ಟೆ ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕ ಮತದಾರರನ್ನು ಗುರುವಾರ ಬಿಜೆಪಿ ಮುಖಂಡರು ಭೇಟಿಯಾಗಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಮಲೆಯೂರು ನಾಗೇಂದ್ರ ಮಾತನಾಡಿ, ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೆಚ್ಚಿನ ಒತ್ತು ನೀಡಿವೆ. ಹೆಚ್ಚು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸಿ, ಶಿಕ್ಷಕರನ್ನು ನೇಮಕ ಮಾಡಿದ್ದು, ಅಂದಿನ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಡಿಸಿಎಂ ಅಗಿದ್ದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಎಂಬುದನ್ನು ಶಿಕ್ಷಕ ಸಮುದಾಯದವರು ತಿಳಿದು ನಮ್ಮ ಮೈತ್ರಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಮರಿತಿಬ್ಬೇಗೌಡರು ಒಬ್ಬ ಅವಕಾಶವಾದಿ ರಾಜಕಾರಣಿ. ಅವರಿಗೆ ಅಧಿಕಾರ ಮುಖ್ಯವಾಗಿದೆಯೇ ಹೊರತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಇಲ್ಲ. ಕಾಂಗ್ರೆಸ್ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಮಹದೇವ ಪ್ರಸಾದ್, ಹರವೆ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರೀಶ್, ತಾ.ಪಂ. ಮಾಜಿ ಸದಸ್ಯ ಕೆಬ್ಬೇಪುರ ನಂದೀಶ್, ಗ್ರಾ.ಪಂ. ಸದಸ್ಯರಾದ ಮಹೇಂದ್ರ, ನಾಗಪ್ಪ, ಕೇತಹಳ್ಳೀ ಚಿಕ್ಕನಾಗಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷ ಒ.ಐ. ರೇವಣ್ಣ, ಬಿಜೆಪಿ ಮುಖಂಡರಾದ ಶಿವಮೂರ್ತಿ ಇತರರು ಇದ್ದರು.