

ಚಾಮರಾಜನಗರ: ಅರಿಶಿಣವನ್ನು ಬೆಳೆದು ಮಾರಾಟ ಮಾಡಿದಾಗ ಒಮ್ಮೆಯೇ ಹಣ ಕೈ ಸೇರುತ್ತದೆ ಎಂಬ ಕಾರಣಕ್ಕೆ ಅರಿಶಿಣ ಬೆಳೆಗಾರರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೊಳ್ಳೇಗಾಲದ ರೈತ ಮಹಿಳೆ ಸೊಸೈಮೆರಿ ಅಭಿಪ್ರಾಯಪಟ್ಟರು.
ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ರೈತರು ಜಾಗೃತೆ ವಹಿಸಬೇಕೆಂದರು.
ಅಂತೆಯೇ ಬೇಡಿಕೆ ಹೆಚ್ಚಿದಂತೆ ಬಿತ್ತನೆ ಅರಿಶಿಣವನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ರೈತರು ಉತ್ತಮ ಗುಣಮಟ್ಟದ ಅರಿಶಿಣವನ್ನು ಖರೀದಿಸದ ಕಾರಣಕ್ಕೆ ಸಂಕಷ್ಟ ಅನುಭವಿಸಿರುವ ಉದಾಹರಣೆ ಇದೆ. ಇಳುವರಿ ಕುಂಠಿತವಾಗುವುದು, ರೋಗ ಬರುವುದು ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಉತ್ತಮ ಗುಣಮಟ್ಟದ ಬಿತ್ತನೆ ಅರಿಶಿಣವನ್ನು ರೈತರಿಗೆ ತಲುಪಿಸಲು ಮುಂದಾಗಬೇಕು ಎಂದರು.