

ಚಾಮರಾಜನಗರ: ಜಮೀನಿನಲ್ಲಿ ಇರುವ ಮಣ್ಣಿನ ಗುಣಕ್ಕೆ ತಕ್ಕಂತೆ ಅರಿಶಿಣ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದಾಗಿದೆ ಎಂದು ಕೊಳ್ಳೇಗಾಲದ ರೈತ ಮಹಿಳೆ ಕೆಂಪನಪಾಳ್ಯ ಶೀಲಾ ಹೇಳಿದರು.
ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ರೈತರು ಜಾಗೃತೆ ವಹಿಸಬೇಕೆಂದರು.
ಗೊಬ್ಬರ ನಿರ್ವಹಣೆ ಹಾಗೂ ವ್ಯವಸಾಯ ನಿಯಮಾನುಸಾರವಾಗಿ ಇರಬೇಕಾಗುತ್ತದೆ. ಬಿತ್ತನೆ ಅರಿಶಿಣ ಮಾರಾಟ ಮಾಡುವವರು ನಮ್ಮಿಂದಲೇ ಅರಿಶಿಣವನ್ನು ಖರೀದಿ ಮಾಡಿರುತ್ತಾರೆ. ಬೆಲೆ ಬಂದಾಗ ಮಾರಾಟ ಮಾಡುವುದರಿಂದ ಅದರಲ್ಲಿ ಗುಣಮಟ್ಟ ಬಯಸಲು ಸಾಧ್ಯವೆ? ಹಾಗಾಗಿ ಹೊಸದಾಗಿ ಅರಿಶಿಣ ಬೆಳೆಯುವ ರೈತರು ಈಗಾಗಲೇ ಅರಿಶಿಣ ಬೆಳೆದಿರುವ ರೈತರ ಜಮೀನಿನಲ್ಲಿ ಖರೀದಿ ಮಾಡಿದರೆ ಅನುಕೂಲವಾಗುತ್ತದೆ ಎಂದರು.