

ಚಾಮರಾಜನಗರ: ಜಿಲ್ಲೆಯಲ್ಲಿ ವಿಶೇಷವಾಗಿ ಚಾಮರಾಜನಗರ ತಾಲೂಕಿನ ಅಂಕನಶೆಟ್ಟಿಪುರದಲ್ಲಿರುವ ಸೌಹಾರ್ದ ರೈತ ಉತ್ಪಾದಕರ ಸಂಸ್ಥೆ, ಉಡಿಗಾಲ ರೈತ ಉತ್ಪಾದಕರ ಸಂಸ್ಥೆ ಹಾಗೂ ಕೊಳ್ಳೇಗಾಲ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯಲ್ಲಿ ಅರಿಶಿಣ ಬೀಜ ಬೆಳೆಗಾರ ರೈತರು ಇದ್ದಾರೆ. ಅವರು ರೈತರಿಗೆ ವಿತರಣೆ ಮಾಡುತ್ತಿದ್ದಾರೆ ಎಂದು ತಾಲೂಕಿನ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್ ತಿಳಿಸಿದರು.
ಅರಿಶಿಣ ಬೆಳೆಗೆ ಉತ್ತಮ ಬೆಲೆ ಬಂದಿದ್ದ ಕಾರಣ ಹಲವು ರೈತರು ಅಧಿಕ ಪ್ರಮಾಣದಲ್ಲಿ ಈ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗುಣಮಟ್ಟ ಪರಿಶೀಲನೆ ಮಾಡದೆ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯವಾಣಿಯೊಂದಿಗೆ ಮಾತನಾಡಿ, ರೈತರು ಜಾಗೃತೆ ವಹಿಸಬೇಕೆಂದರು.
ಈಗಾಗಲೇ ಗುಂಡ್ಲುಪೇಟೆ ಮತ್ತು ಚಾಮರಾಜನಗರದ 2 ಕಂಪನಿ ಇವರಿಂದ ಖರೀದಿ ಮಾಡುತ್ತಿದೆ. ನೋಂದಾಯಿತ ಅರಿಶಿಣ ಬೆಳೆಗಾರರನ್ನು ಹೊರತುಪಡಿಸಿ, ಉತ್ತಮವಾದ ಬಿತ್ತನೆ ಬೀಜ ಬಯಸುವ ರೈತರು ತಾಲೂಕಿನ ಹರದನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಅದಲ್ಲದೇ ರೋಗ ನಿರ್ವಹಣೆ ಹಾಗೂ ಗೊಬ್ಬರ ಬಳಕೆ ಸಂಬಂಧ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.