

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ತೀವ್ರ ತೊಂದರೆಯಾಗುತ್ತಿದ್ದು ಕೂಡಲೇ ಇದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೋಬಳಿ ಕೇಂದ್ರವಾಗಿರುವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಅಂಚೆ, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಪೊಲೀಸ್ ಠಾಣೆ, ರೈತರ ತರಕಾರಿ ಮಾರುಕಟ್ಟೆ, ಪ್ರೌಢಶಾಲೆಗಳು, ಪಿಯುಸಿ ಮತ್ತು ಪದವಿ ಕಾಲೇಜು, ಐಟಿಐ ಕಾಲೇಜುಗಳಿದ್ದು ಇಲ್ಲಿಗೆ ಸುತ್ತಮುತ್ತಲ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಪ್ರತಿ ಗುರುವಾರ ದೊಡ್ಡ ಸಂತೆ ನಡೆಯುತ್ತಿರುವುದರಿಂದ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ. ಪ್ರತಿ ದಿನ ಸುತ್ತ್ತಲ ಗ್ರಾಮಗಳ ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಬೈಕ್, ಕಾರುಗಳಲ್ಲಿ ಆಗಮಿಸುತ್ತಾರೆ.
ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿ ಪ್ರತಿ ದಿನ ಸಾರಿಗೆ ಬಸ್ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ಪಾರ್ಕಿಂಗ್ ಮಾಡಲು ಸರಿಯಾದ ವ್ಯವಸ್ಥೆಯಿಲ್ಲ. ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಎದುರಾಗಿದೆ.
ಅಡ್ಡಾದಿಡ್ಡಿ ನಿಲ್ಲುವ ವಾಹನಗಳಿಗೆ ಪೊಲೀಸರು ದಂಡ ವಿಧಿಸುತ್ತಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ವಾರದ ಒಂದೊಂದು ದಿನ ರಸ್ತೆಯ ಎಡ ಹಾಗೂ ಬಲ ಭಾಗದಲ್ಲಿ ಬೈಕ್ ಪಾರ್ಕಿಂಗ್ ಮಾಡಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.